ಬೆಂಗಳೂರು : ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಇದೀಗ ಒತ್ತುವರಿ ಮಾಡಿಕೊಂಡಂತಹ ಜಮೀನು ಸರ್ವೆ ಮಾಡಲು ಹೈಕೋರ್ಟ್ ಆದೇಶ ಹೊರಡಿಸಿದ್ದು, ಜನೆವರಿ 15 ರಂದು ಜಂಟಿಯಾಗಿ ಸರ್ವೆ ನಡೆಸಲು ಆದೇಶಿಸಿದೆ.
ಹೌದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಡು ಹೋಬಳಿಯ ಹೊಸಹುಡ್ಯ ಗ್ರಾಮದ ವ್ಯಾಪ್ತಿಯ ಸರ್ವೆ ನಂ.1 ಮತ್ತು 2ರಲ್ಲಿನ 61 ಎಕರೆ 39 ಗುಂಟೆ ಅರಣ್ಯ ಜಮೀನು ಕುರಿತು ಜ.15ರಂದು ಜಂಟಿ ಸರ್ವೇ ನಡೆಸಲು ಹೈಕೋರ್ಟ್ ಆದೇಶಿಸಿದೆ.
ಜಮೀನಿನ ಸರ್ವೇನಡೆಸಲು ರಚಿಸಲಾಗಿದ್ದ ಸಮಿತಿಯನ್ನು ಬದಲಾಯಿಸಿ ಬೆಂಗಳೂರು ಜಿಲ್ಲಾ ಪ್ರಾದೇಶಿಕ ಆಯುಕ್ತರು ನೀಡಿರುವ ಪತ್ರವನ್ನು ರದ್ದುಪಡಿಸಬೇಕು ಎಂದು ಕೋರಿ ಮತ್ತು ಕೆ.ಆರ್.ರಮೇಶ್ ಕುಮಾರ್ ಅವರು ಲಭ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಜಮೀನಿನ ಸರ್ವೇಯನ್ನು ವಿಳಂಬ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ರಾಯಲ್ಪಡು ಹೋಬಳಿ ನಿವಾಸಿ ಕೆ.ವಿ.ಶಿವಾರೆಡ್ಡಿ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಅವರ ಪೀಠ, ವಿವಾದಿತ ಜಮೀನ ಕುರಿತು ಜ.15ರಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕರು ಜಂಟಿಯಾಗಿ ಸರ್ವೇ ನಡೆಸಬೇಕು. ಈ ವೇಳೆ ಖುದ್ದು ಹಾಜರಾಗಲು ಕೆ.ಆರ್. ರಮೇಶ್ ಕುಮಾರ್ ಅವರಿಗೆ ಕೋಲಾರ ಜಿಲ್ಲಾಧಿಕಾರಿ ನೋಟಿಸ್ ನೀಡಬೇಕು.
ಒಂದು ವೇಳೆ ರಮೇಶ್ ಕುಮಾರ್ ಅವರು ಹಾಜರಾಗದೆ ಹೋದರೆ ಅಥವಾ ಅವರ ಪ್ರತಿನಿಧಿಗಳು ಸಹ ಹಾಜರಾಗದಿದ್ದರೆ ಸರ್ವೇ ಕಾರ್ಯ ಮುಂದುವರಿಸಬೇಕು ಆದರೆ ರಮೇಶ್ ಕುಮಾರ್ ಅವರು ಯಾವುದೇ ಹಕ್ಕನ್ನು ಕ್ಷೇಮು ಮಾಡುವಂತಿಲ್ಲ. ಸರ್ವೆ ಕಾರ್ಯ ಮುಂದುವರಿಸಿ ಜನವರಿ 30ರಂದು ಜಂಟಿ ಸರ್ವೆ ವರದಿಯನ್ನು ಹೈಕೋರ್ಟಿಗೆ ಸಲ್ಲಿಸಬೇಕು ಎಂದು ನ್ಯಾಯಪೀಠ ಇದೆ ವೇಳೆ ತಿಳಿಸಿತು.