ಬೆಂಗಳೂರು : ವಾಹನ ಚಾಲನೆ ಪರವಾನಿಗೆ ಅವಧಿ ಮುಗಿದ ನಂತರ 30 ದಿನಗಳ ಒಳಗೆ ನವೀಕರಣಗೊಳಿಸಿಕೊಳ್ಳಬೇಕು. ಒಂದು ವೇಳೆ ಅರ್ಜಿ ಸಲ್ಲಿಸದೆ ಹೋದಲ್ಲಿ, ವಾಹನ ಅಪಘಾತಕ್ಕೆ ಈಡಾದರೆ ಈ ವೇಳೆ ವಾಹನ ಮಾಲೀಕರು ತಮ್ಮ ಕೈಯಿಂದ ಅಪಘಾತಕ್ಕೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಪರವಾನಗಿ ಅವಧಿ ಮುಗಿದ ದಿನದಿಂದ 30 ದಿನಗಳಲ್ಲಿ ನವೀಕರಣಕ್ಕೆ ಅರ್ಜಿ ಸಲ್ಲಿಸಿರುವ ಬಗ್ಗೆ ಸಾಕ್ಷ್ಯ ಒದಗಿಸದ ಅಂಶ ಪರಿಗಣಿಸಿರುವ ಹೈಕೋರ್ಟ್, ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡಿ ಅಪಘಾತಕ್ಕೆ ಕಾರಣವಾದ ಆ್ಯಂಬುಲೆನ್ಸ್ ಚಾಲಕನ ಮೇಲೆ ಮೋಟಾರು ಅಪಘಾತ ಪರಿಹಾರ ಕ್ಲೇಮು ನ್ಯಾಯಾಧಿಕರಣ ಹೊರಿಸಿದ್ದ ಶೇ.50ರಷ್ಟು ಹೊಣೆಗಾರಿಕೆಯನ್ನು ಶೇ.100ಕ್ಕೆ ಹೆಚ್ಚಿಸಿ ಆದೇಶಿಸಿದೆ.
ಅಪಘಾತ ಪ್ರಕರಣವೊಂದರ ಸಂಬಂಧ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ ಈ ಆದೇಶ ಮಾಡಿದೆ. ಅವಧಿ ಮುಗಿದ 30 ದಿನಗಳ ಒಳಗೆ ವಾಹನ ಚಾಲನಾ ಪರವಾನಿಗೆಯನ್ನು ನವೀಕರಣಗೊಳಿಸುತ್ತಿದ್ದಲ್ಲಿ ಅಪಘಾತಕ್ಕೆ ಈಡಾದ ವೇಳೆ ಸಂತ್ರಸ್ತರ ಸಂಪೂರ್ಣ ಜವಾಬ್ದಾರಿಯನ್ನು ವಾಹನ ಮಾಲೀಕರು ವಹಿಸಿಕೊಳ್ಳಬೇಕೆಂದು ಇದೀಗ ಹೈಕೋರ್ಟ್ ಆದೇಶ ನೀಡಿದೆ.