ಬೆಂಗಳೂರು : ಅನಧಿಕೃತ ಫ್ಲೈಕ್ಸ್ ಬ್ಯಾನರ್ ಅಳವಡಿಕೆ ಸಂಬಂಧ ಇದೀಗ ಹೈಕೋರ್ಟ್ ರಾಜ್ಯ ಸರ್ಕಾರ, ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಜನದಟ್ಟಣೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಫ್ಲೇಕ್ಸ್ ಬ್ಯಾನರ್ ಅಳವಡಿಸದಂತೆ ನಿರ್ದೇಶನ ನೀಡಿದೆ.
ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ ಅಳವಡಿಕೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತು ಇದೇ ವಿಚಾರವಾಗಿ ಮಾಧ್ಯಮಗಳ ವರದಿಯನ್ನು ಆಧರಿಸಿ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಆರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾಗಿದ್ದ ಪ್ರತಿಮಾ ಹೊನ್ನಾಪುರ, ನಗರದಲ್ಲಿ ಅಕ್ರಮ ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ಬೈಲಾ ಕರಡು ಸಿದ್ಧಪಡಿಸಲಾಗಿದೆ. ಇದಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಸಂಬಂಧ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ಎಲ್ಲ ಆಕ್ಷೇಪಣೆಗಳನ್ನು ಪರಿಗಣಿಸಿ ಅಂತಿಮವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.
ವಕೀಲ ಜಿ.ಆರ್.ಮೋಹನ್ ವಾದಿಸಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್‌ಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಹೆಚ್ಚು ಅಕ್ರಮ ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಪೀಠಕ್ಕೆ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರು ಸಲಹೆ ಸೂಚನೆಗಳನ್ನು ನೀಡಬಹುದು. ಅವುಗಳನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಪೀಠದೆದುರು ಮಂಡಿಸಬೇಕು.ಬೈಲಾಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದರೆ ಸೆಪ್ಟಂಬರ್ 18ರೊಳಗೆ ಸಲ್ಲಿಸಬೇಕು ಎಂದು ತಿಳಿಸಿ ವಿಚಾರಣೆಯನ್ನು ಸೆಪ್ಟಂಬರ್ 25ಕ್ಕೆ ಮುಂದೂಡಿತು.