ಬೆಂಗಳೂರು : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ಅಧಿಕಾರಿಗಳು ತನಿಖೆ ನಡೆಸಲು ಬಿಜೆಪಿ ಸರ್ಕಾರ ಸಮ್ಮತಿ ನೀಡಿತ್ತು. ಆದರೆ ಇದನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿದ್ದು, ಇದನ್ನು ಪ್ರಶ್ನಿಸಿ ಸಿಬಿಐ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆದಿದೆ.
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ ಗೆ ಸಂಬಂಧಿಸಿದಂತೆ ಸರ್ಕಾರದ ಸಮ್ಮತಿ ಪಡೆದಿದ್ದನ್ನು ಪ್ರಶ್ನಿಸಿ ಸಿಬಿಐ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅರ್ಜಿ ಸಲ್ಲಿಸಿದ್ದರು. ಇದೀಗ ಸಿಬಿಐ ಹಾಗೂ ಯತ್ನಾಳ ಸಲ್ಲಿಸಿರುವ ಅರ್ಜಿಯನ್ನು ಇದೀಗ ನ್ಯಾ. ಕೆ ಸೋಮಶೇಖರ್, ಉಮೇಶ್ ಎಂ. ಅಡಿಗರಿದ್ದ ಪೀಠದಲ್ಲಿ ವಿಚಾರಣೆ ನಡೆಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಬೆಳವಣಿಗೆಗಳಾಗಿವೆ ಮುಂದಿನ ವಿಚಾರಣೆಯ ವೇಳೆ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಹೈಕೋರ್ಟ್ ಗೆ ಡಿಕೆಶಿ ಪರ ಹಿರಿಯ ವಕೀಲ ಉದಯ್ ಹೊಳ್ಳ ಹೇಳಿಕೆ ನೀಡಿದ್ದಾರೆ. ಸಿಬಿಐ ರಿಟ್ ಅರ್ಜಿ ವಿಚಾರಣೆ ಏಪ್ರಿಲ್ 5ಕ್ಕೆ ಹೈಕೋರ್ಟ್ ಮುಂದೂಡಿದೆ.
ಪ್ರಕರಣದ ಹಿನ್ನೆಲೆ?
2018ರಲ್ಲಿ ಡಿಕೆ ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಬಳಿಕ ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆ ಅಗತ್ಯವಿದೆ ಎಂಬ ಕಾರಣಕ್ಕೆ ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಅಂದಿನ ಸರ್ಕಾರದ ಸಮ್ಮತಿ ಪಡೆದು ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.
ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ಕೇಸ್ ದಾಖಲಿಸಿದ್ದ ಸಿಬಿಐ, 2013 ರಿಂದ 2018ರ ಅವಧಿಯಲ್ಲಿ ಗಳಿಸಿದ ಆದಾಯ, ಹಾಗೂ ವೆಚ್ಚದ ಮಾಹಿತಿ ಆಧರಿಸಿ 74.93 ಕೋಟಿ ರೂ. ಆದಾಯ ಮೀರಿ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಈ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತದಲ್ಲಿದೆ.
ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಕಳೆದ ವರ್ಷ ನವೆಂಬರ್ 29 ರಂದು ನಡೆಸಿತ್ತು. ಈ ಮಧ್ಯೆ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಸರ್ಕಾರ ನೀಡಿದ ಸಮ್ಮತಿಯನ್ನು ಹಿಂಪಡೆಯಲು ಸಚಿವ ಸಂಪುಟದ ಒಪ್ಪಿಗೆ ಮೇರೆಗೆ ಹಿಂಪಡೆಯಲಾಗಿದೆ. ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಕಾನೂನು ಅಭಿಪ್ರಾಯ ಆಧರಿಸಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.
ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಸಿಬಿಐ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಜನವರಿ 5 ರಂದು ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿತ್ತು. ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರು ಆದೇಶ ಹೊರಡಿಸಿದ್ದರು. ಹಾಗೆ ಸಿಬಿಐ ಅರ್ಜಿ ಸಂಬಂಧ ಡಿಕೆ ಶಿವಕುಮಾರ್ ಅವರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿತ್ತು. ಸಿಬಿಐ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ಇದೀಗ ನ್ಯಾ.ಕೆ.ಸೋಮಶೇಖರ್, ನ್ಯಾ. ಉಮೇಶ್ ಎಂ.ಅಡಿಗರ ಅವರಿರುವ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.