ಹಾಸನ : ರಾಜ್ಯದಲ್ಲಿ ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ನಿಜಕ್ಕೂ ಆತಂಪಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನಲ್ಲಿ ಸರ್ಕಾರಿ ಶಾಲಾ ಬಾಲಕಿಯರ ಮೇಲೆ ದೈಹಿಕ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದ ಬೆನ್ನಲ್ಲೇ ಹಾಸನದಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಖಾಸಗಿ ಶಾಲೆಯ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದು, ಸ್ಥಳೀಯರು ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ.ಬೇಲೂರು ತಾಲೂಕಿನ ಖಾಸಗಿ ಶಾಲೆಯ ಮುಖ್ಯ ಶಿಕ್ಷಕ ನರೇಂದ್ರ ಎಂಬಾತ ವಿದ್ಯಾರ್ಥಿನಿಯರನ್ನು ತನ್ನ ಆಫೀಸ್ ರೂಂಗೆ ಕರೆಸಿಕೊಂಡು ಕಸ ಗುಡಿಸಲು ಹೇಳುವ ನೆಪವೊಡ್ಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಇದರಿಂದ ನೊಂದ ವಿದ್ಯಾರ್ಥಿನಿಯರು ಯಾರಿಗೂ ಹೇಳದೇ ಇದ್ದರು.
ಕೊನೆಗೂ ಮುಖ್ಯ ಶಿಕ್ಷಕನ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿಯರು ಸಹಪಾಠಿಗಳ ಜೊತೆ ಹೇಳಿಕೊಂಡಿದ್ದಾರೆ. ನಂತರ ಈ ವಿಷಯ ಪೋಷಕರಿಗೆ ಗೊತ್ತಾಗಿದೆ , ನಂತರ ಪೋಷಕರು ಕಾಮುಕ ಶಿಕ್ಷಕನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ .
ಬೆಂಗಳೂರಿನ ಸರ್ಕಾರಿ ಶಾಲೆಯಲ್ಲೂ ಲೈಂಗಿಕ ದೌರ್ಜನ್ಯ
ಬೆಂಗಳೂರಿನಲ್ಲಿ 13 ಸರ್ಕಾರಿ ಶಾಲಾ ಬಾಲಕಿಯರ ಮೇಲೆ ದೈಹಿಕ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ.
ಸರ್ಕಾರಿ ಶಾಲೆಯಲ್ಲಿ 13 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಕ್ಕೆ ಸಂಬಂಧಿಸಿ ದೈಹಿಕ ಶಿಕ್ಷಕ ಆಂಜಿನಪ್ಪ (50)ನನ್ನು ಪೋಕ್ಸೋ ಕಾಯ್ದೆಯಡಿ ಬೆಂಗಳೂರಿನ ಹೆಬ್ಬಾಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
8 ತಿಂಗಳ ಹಿಂದೆಯಷ್ಟೇ ಹೆಬ್ಬಾಳಕ್ಕೆ ವರ್ಗಾವಣೆಯಾಗಿದ್ದ ಅಂಜಿನಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ಹೀಗಾಗಿ ಶಾಲಾ ಮುಖ್ಯ ಶಿಕ್ಷಕರಿಗೆ ದೂರು ನೀಡಲಾಗಿತ್ತು. ಸದ್ಯ 13 ಬಾಲಕಿಯರ ಹೇಳಿಕೆ ದಾಖಲಿಸಿರುವ ಪೊಲೀಸರು. ಈ ಹಿಂದೆ ಅಂಜಿನಪ್ಪ ಕಾರ್ಯನಿರ್ವಹಿಸಿದ್ದ ಶಾಲೆ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಲಘು, ಭಾರಿ ವಾಹನ ತರಬೇತಿ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: BMTCಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ