ಹಾಸನ : ವರ್ಷಕ್ಕೊಮ್ಮೆ ದರ್ಶನ ಕಲ್ಪಿಸುವ ಪ್ರಸಿದ್ಧ ಹಾಸನಾಂಬ ದೇವಿ ದರ್ಶನ ಪಡೆಯಲು ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.
ಈ ಹಿನ್ನೆಲೆ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೇವಿ ದರ್ಶನದ ಅವಧಿ ಹೆಚ್ಚಳ ಮಾಡಲಾಗುತ್ತದೆ. ದೂರದ ಊರುಗಳಿಂದ ಭಕ್ತರು ಬರುವುದರಿಂದ ರಾತ್ರಿ 10 ಗಂಟೆಗೆ ವರೆಗೆ ಬಾಗಿಲು ತೆರೆಯಲು ಸೂಚನೆ ನೀಡಲಾಗಿದೆ. ಪೂಜೆ ಹಾಗೂ ನೈವೇದ್ಯಕ್ಕಾಗಿ ಒಂದು ಗಂಟೆ ಮಾತ್ರ ಗರ್ಭಗುಡಿ ಬಾಗಿಲು ಮುಚ್ಚುವಂತೆ ಸೂಚನೆ ನೀಡಲಾಗಿದೆ. ಮೊದಲು ಪೂಜೆ ಮತ್ತು ನೈವೇದ್ಯಕ್ಕಾಗಿ 2 ಗಂಟೆ ಬಾಗಿಲು ಮುಚ್ಚಲಾಗುತ್ತಿತ್ತು, ಇನ್ನು ಮುಂದೆ ಒಂದು ಗಂಟೆ ಮಾತ್ರ ಬಾಗಿಲು ಮುಚ್ಚಲಿದೆ. ಹಾಗೆಯೇ ದರ್ಶನದ ಅವಧಿ ಕೂಡ ಹೆಚ್ಚಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಮಾಹಿತಿ ನೀಡಿದ್ದಾರೆ.
42.78 ಲಕ್ಷ ರೂಪಾಯಿ ಕಾಣಿಗೆ ಸಂಗ್ರಹ
ಹಾಸನಾಂಬೆ ದೇವಿ ದರ್ಶನದಿಂದ ಕೇವಲ ಮೂರು ದಿನಗಳಲ್ಲಿ 42.78 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಕಾಣಿಕೆ ಹುಂಡಿಗೆ ಭಕ್ತರು ಇನ್ನು ಕಾಣಿಕೆಯನ್ನು ಅರ್ಪಿಸುತ್ತಲೇ ಇದ್ದಾರೆ.
ವರ್ಷಕ್ಕೊಮ್ಮೆ ದರ್ಶನ ಕಲ್ಪಿಸುವ ಹಾಸನಂಬೆಯ ಗರ್ಭದ ಗುಡಿ ಬಾಗಿಲು ಅಕ್ಟೋಬರ್ 13ರಂದು ತೆರೆದಿತ್ತು. ಆದರೆ ಭಕ್ತರಿಗೆ ದೇವಿ ದರ್ಶನ ಮಡಲು ಅಕ್ಟೋಬರ್ 14ರಿಂದ ಅವಕಾಶ ಮಾಡಿಕೊಡಲಾಗಿತ್ತು. ಸರತಿ ಸಾಲಿನಲ್ಲಿ ಹೆಚ್ಚುಕಾಲ ನಿಲ್ಲಲು ಆಗಲ್ಲ ಎನ್ನುವವರಿಗಾಗಿ ತಲಾ ಒಂದು ಸಾವಿರ ರೂಪಾಯಿ ಶುಲ್ಕ ವಿಧಿಸಿ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಕಳೆದ ಮೂರು ದಿನದಲ್ಲಿ ಅಂದರೆ ಅಕ್ಟೋಬರ್ 14ರಂದು 4.99 ಲಕ್ಷ ರೂಪಾಯಿ, ಅಕ್ಟೋಬರ್ 15ರಂದು 3.31 ಲಕ್ಷ ರೂಪಾಯಿ, ಅಕ್ಟೋಬರ್ 16ರಂದು 8.35 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಅದೇ ರೀತಿ ತಲಾ 300 ರೂಪಾಯಿ ವಿಶೇಷ ದರ್ಶನದಿಂದ ಅಕ್ಟೋಬರ್ 14 ರಂದು 4.30 ಲಕ್ಷ ರೂಪಾಯಿ, ಅಕ್ಟೋಬರ್ 15 ರಂದು 4.49 ಲಕ್ಷ ರೂಪಾಯಿ, ಅಕ್ಟೋಬರ್ 16 ರಂದು 1.20 ಲಕ್ಷ ರೂಪಾಯಿ ಸಂಗ್ರಹವಾಗಿದೆ.