ಕೆಲವೊಮ್ಮೆ ಪೊಲೀಸ್ ಠಾಣೆಗಳಲ್ಲಿ ರಾಜಕೀಯ ಒತ್ತಡಕ್ಕೋ, ಇಲ್ಲವೇ ಮೇಲಾಧಿಕಾರಿಗಳ ಮೌಖಿಕ ಸೂಚನೆಗೋ ಮಣಿದು ಅಮಾಯಕರ ಮೇಲೆ ಎಫ್ಐಆರ್ ದಾಖಲಿಸುವ ಘಟನೆಗಳು ನಡೆಯುತ್ತವೆ. ಠಾಣಾಧಿಕಾರಿಗಳು (SHO) ತಮ್ಮ ಮನಸ್ಸಾಕ್ಷಿ ಮತ್ತು ಕಾನೂನು ಬದಿಗಿಟ್ಟು, ಕೇವಲ “ಹೇಳಿದ ಕೆಲಸ” ಮಾಡಲು ಹೋದಾಗ ಇಂತಹ ತಪ್ಪುಗಳಾಗುತ್ತವೆ.
ನಿಮ್ಮ ಮೇಲೂ ಇಂತಹದೇ “ಸುಳ್ಳು ಕೇಸ್” ದಾಖಲಾಗಿದ್ದರೆ ಹೆದರಬೇಡಿ. ಮಾಹಿತಿ ಹಕ್ಕು ಕಾಯಿದೆ (RTI) ಅಡಿಯಲ್ಲಿ ಈ ಕೆಳಗಿನ ಕೇಳ್ವಿಗಳನ್ನು ಕೇಳಿ, ಪೊಲೀಸರ ನಿದ್ದೆ ಗೆಡಿಸಿ!
ಕೇಳಬೇಕಾದ ಮಾಹಿತಿಗಳು ಇಲ್ಲಿವೆ:
೧. ನನ್ನ ಮೇಲೆ ಎಫ್ಐಆರ್ ದಾಖಲಿಸಲು ಮೇಲಾಧಿಕಾರಿಗಳು ಲಿಖಿತ ಇಲ್ಲವೇ ಬಾಯಿ ಮಾತಿನ (ಮೌಖಿಕ) ಮೂಲಕ ನಿರ್ದೇಶನ ನೀಡಿದ್ದರೆ, ಅದರ ವಿವರ ಮತ್ತು ದಾಖಲೆಗಳನ್ನು ಕೊಡಿ.
೨. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಪ್ರಕರಣಗಳಲ್ಲಿ ಎಫ್ಐಆರ್‌ಗೂ ಮುನ್ನ “ಪ್ರಾಥಮಿಕ ಪರಿಶೀಲನೆ” (Preliminary Enquiry) ನಡೆಸಬೇಕು. ನನ್ನ ಪ್ರಕರಣದಲ್ಲಿ ಇದು ನಡೆದಿದ್ದರೆ ಅದರ ವರದಿ ಮತ್ತು ಟಿಪ್ಪಣಿ (Noting) ಕೊಡಿ.
೩. ಸದರಿ ಎಫ್ಐಆರ್ ದಾಖಲಾದ ದಿನಾಂಕ ಮತ್ತು ಸಮಯದಂದು ಪೊಲೀಸ್ ಠಾಣೆಯ ‘ದಿನಚರಿ’ಯಲ್ಲಿ (Station Diary / General Diary) ನಮೂದಾಗಿರುವ ಪ್ರಮಾಣಿತ ಪ್ರತಿಯನ್ನು ಕೊಡಿ. (ಇದರಿಂದ ಸಮಯದ ವ್ಯತ್ಯಾಸವಿದ್ದರೆ ಸಿಕ್ಕಿಬೀಳುತ್ತಾರೆ).
೪. ದೂರು ಬಂದಾಗ ಅದನ್ನು ಪರಿಶೀಲಿಸಿ, ಇದು ಎಫ್ಐಆರ್ ಮಾಡಲು ಯೋಗ್ಯವೇ ಎಂದು ಸ್ವತಂತ್ರವಾಗಿ ತೀರ್‍ಮಾನ ಕೈಗೊಂಡಿರುವ ಠಾಣಾಧಿಕಾರಿ (SHO) ಈ ಬಗ್ಗೆ ಕಡತದಲ್ಲಿ ಬರೆದಿರುವ ಟಿಪ್ಪಣಿ (File Noting), ಆಂತರಿಕ ಸಂವಹನದ ಪ್ರತಿ ಕೊಡಿ.
೫. ಇಂತಹ ಪ್ರಕರಣದಲ್ಲಿ FIR ದಾಖಲಿಸಲು ಇಲಾಖೆಯ ಆಂತರಿಕ ಸುತ್ತೋಲೆ (Circular) ಅಥವಾ SOP ಏನನ್ನುತ್ತದೆ? ಅದರ ಪ್ರತಿಯನ್ನು ನೀಡಿ.
ಯಾವಾಗ ನೀವು ಈ ಮಾಹಿತಿಗಳನ್ನು ಕೇಳುತ್ತೀರೋ, ಆಗ ತನಿಖಾಧಿಕಾರಿಗೆ “ಇವರು ಕಾನೂನು ಬಲ್ಲವರು, ಸುಮ್ಮನೆ ಹೆದರುವವರಲ್ಲ” ಎಂದು ತಿಳಿಯುತ್ತದೆ. ಒಂದು ವೇಳೆ ದುರುದ್ದೇಶದಿಂದ ಕೇಸ್ ಹಾಕಿದ್ದರೆ, ಈ ಕೇಳ್ವಿಗಳಿಗೆ ಬದಲು ನೀಡಲು ತಡಕಾಡುತ್ತಾರೆ. ಈ ದಾಖಲೆಗಳು ಮುಂದೆ ನ್ಯಾಯಾಲಯದಲ್ಲಿ ನಿಮ್ಮ ನಿರ್ದೋಷತ್ವ ಸಾಬೀತು ಮಾಡಲು ನೆರವಾಗುತ್ತವೆ.
ಕಾನೂನು ಎಂಬುದು ಬರೀ ಶ್ರೀಮಂತರ ಆಸ್ತಿಯಲ್ಲ, ಅದು ಸಾಮಾನ್ಯರ ರಕ್ಷಾ ಕವಚ ಕೂಡ ಹೌದು.








