ಶಿವಮೊಗ್ಗ : ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಪ್ರತೀ ವರ್ಷ ಶ್ರಾವಣ ಮಾಸದ ನಾಗರ ಪಂಚಮಿಯಂದು ಹನುಮಂತ ದೇವರ ಕಾರ್ಣಿಕೋತ್ಸವ ನಡೆಯುತ್ತದೆ. ಮಂಗಳವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗಂಗೆ ಪೂಜೆ ನೆರವೇರಿಸಿದ ನಂತರ ಹನುಮಂತ ದೇವರನ್ನು ಮೈಮೇಲೆ ಆಹ್ವಾನೆ ಮಾಡಿಕೊಂಡ ಗಣಮಗ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರ ಕಂಬವೇರಿ ಕಾರ್ಣಿಕ ನುಡಿಯುತ್ತಾರೆ. ಈ ಬಾರಿ ಶಿವನ ತುರುಬಿಗೆ ಪಂಜರದ ಗಿಳಿ ಹಾರಿತ್ತು ಎಚ್ಚರ ಎಂದು ಉಕ್ತಿ ಹೇಳಿದ್ದಾರೆ.
ಹೌದು ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ, ಎಚ್ಚರ” ಎಂಬುದು ಈ ಬಾರಿಯ ಮೈದೊಳಲು ಗ್ರಾಮದ ಹನುಮಂತ ದೇವರ ಕಾರ್ಣಿಕ. ಹನುಮಂತ ದೇವರ ಕಾರ್ಣಿಕವನ್ನು ಆಧರಿಸಿ ಈ ಭಾಗದ ರೈತಾಪಿ ಜನರು ಇಡೀ ವರ್ಷದ ಮಳೆ, ಬೆಳೆ ಸೇರಿದಂತೆ ಕೃಷಿ ಚಟುವಟಿಕೆಗಳು, ರಾಜಕೀಯ ವಿದ್ಯಮಾನಗಳು, ಪ್ರಕೃತಿ ವೈಪರೀತ್ಯ ಸೇರಿದಂತೆ ರೈತಾಪಿ ಬದುಕಿನ ಭವಿಷ್ಯದ ಕುರಿತು ಕಾರ್ಣಿಕ ನುಡಿಯಲಾಗಿದೆ.
ಕೊನೆಯಲ್ಲಿ ಎಚ್ಚರ ಎಂದಿರುವುದರಿಂದ ಈ ಬಾರಿ ರೈತಾಪಿಗಳಿಗೆ ಸ್ವಲ್ಪ ಹಿನ್ನಡೆಯಾಗುತ್ತದೆ ಎನ್ನಬಹುದು. ದೇಶದೆಲ್ಲೆಡೆ ಅತಿವೃಷ್ಟಿಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅಡಚಣೆ ಉಂಟಾಗಬಹುದು. ಶಿವನ ತುರುಬಿನಲ್ಲಿರುವ ಗಂಗೆಗೆ ಭೂ ಲೋಕದ ಗಿಳಿ ಹಾರುವುದೆಂದರೆ ಈ ಬಾರಿ ಮುಂಗಾರಿಗಿಂತ ಹಿಂಗಾರು ಮಳೆ ತುಸು ಜೋರಾಗಿರಲಿದೆ. ರಾಜ್ಯ ರಾಜಕೀಯ ವಿದ್ಯಮಾನದಲ್ಲಿ ತಲ್ಲಣ ಉಂಟಾಗುವುದು ನಿಶ್ಚಿತ, ಕುರ್ಚಿ ಕಿತ್ತಾಟಗಳು ಜೋರಾಗಲಿವೆ ಎಂದು ಜನರು ಪರಸ್ಪರ ವಿಶ್ಲೇಷಣೆ ಮಾಡಿಕೊಳ್ಳುತ್ತಿದ್ದಾರೆ.