ಬೆಂಗಳೂರು : ಮಂಡ್ಯ ತಾಲೂಕಿನ ಕೆರಗೋಡಿನಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಮಾತನಾಡಿ, ಕಾನೂನು ವಿರುದ್ಧ ಯಾರೇ ನಡೆದುಕೊಂಡರೂ ಅವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರಗೋಡಿನಲ್ಲಿ ಧ್ವಜ ಹಾರಿಸಲು ಅನುಮತಿ ಕೇಳಿದ್ದರು. ರಾಷ್ಟ್ರಧ್ವಜ, ನಾಡ ಧ್ವಜ ಹಾರಿಸಲು ಅನುಮತಿ ಕೇಳಿದ್ರು. ಅದಕ್ಕೆ ಅನುಮತಿ ಪಂಚಾಯತ್ ಅವರೇ ಕೊಟ್ಟಿದ್ದಾರೆ. ಪಂಚಾಯತ್ ಅವರು ಅನುಮತಿ ಕೊಡುವಾಗ ಕೆಲವು ಕಂಡೀಷನ್ ಹಾಕಿ ಕೊಟ್ಟಿದ್ದಾರೆ. ಬೇರೆ ಧ್ವಜ ಹಾಕಬಾರದು ಎಂದು ಪಂಚಾಯತ್ ಹೇಳಿ, ಮುಚ್ಚಳಿಕೆ ಬರೆಸಿಕೊಂಡು ಅನುಮತಿ ಕೊಟ್ಟಿದ್ದಾರೆ.
ಮುಚ್ಚಳಿಕೆಯಲ್ಲಿ ಅವರು ಬೇರೆ ಯಾವುದೇ ಧ್ವಜ ಹಾಕೋದಿಲ್ಲ ಎಂದು ಬರೆದು ಕೊಟ್ಟಿದ್ದಾರೆ. ರಾಷ್ಟ್ರ ಮತ್ತು ನಾಡ ಧ್ವಜ ಬಿಟ್ಟು ಯಾವುದೇ ರಾಜಕೀಯ ಧ್ವಜ ಹಾಕೋದಿಲ್ಲ, ಧರ್ಮದ ಧ್ವಜ ಹಾಕೋದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಅದಾದ ಮೇಲೂ ಹೋಗಿ ಹನುಮಾನ್ ಧ್ವಜ ಹಾರಿಸಿದ್ದಾರೆ ಇದು ಸರಿಯಲ್ಲ ಎಂದರು.
ನಿಮ್ಮ ಜಾಗದಲ್ಲಿ ಹನುಮಧ್ವಜ ಹಾಕೋಕೆ ಯಾರು ತಡೆಯಲ್ಲ. ದೇವಸ್ಥಾನ, ನಿಮ್ಮ ಮನೆ ಬಳಿ ಧ್ವಜ ಹಾಕಲು ಯಾರು ತಡೆಯೋದಿಲ್ಲ. ಆದರೆ ಸಾರ್ವಜನಿಕ ಸ್ಥಳ, ಸರ್ಕಾರಿ ಜಾಗದಲ್ಲಿ ಹಾಕಿದ್ದು ತಪ್ಪು. ತಪ್ಪು ಇವರೇ ಮಾಡಿ ಇವರೇ ಸರ್ಕಾರವನ್ನು ದೂಷಣೆ ಮಾಡೋದು, ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡೋದು ಸರಿಯಲ್ಲ. ಹೀಗಾಗಿ ಕಾನೂನು ಪ್ರಕಾರ ಏನು ಕ್ರಮ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.
ಹನುಮ ನಮಗೆಲ್ಲರಿಗೂ ದೇವರು. ಹನುಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡೋದು, ನಡೆದುಕೊಳ್ಳೋದು ಇಲ್ಲ. ಅವರಿಗೆ ಹೇಗೆ ದೇವರೋ ನಮಗೂ ದೇವರೇ. ಆದರೆ ಕಾನೂನು ಈ ದೇಶದಲ್ಲಿ ಎಲ್ಲರಿಗೂ ಒಂದೇ. ಕಾನೂನು ಪಾಲನೆ ಮಾಡಬೇಕು. ಸರ್ಕಾರಿ ಜಾಗದಲ್ಲಿ ಹೋಗಿ ಧಾರ್ಮಿಕ ಧ್ವಜ ಹಾಕಿದ್ರೆ ಹೇಗೆ? ಬೇರೆಯವರು ಕೂಡಾ ಅಂಬೇಡ್ಕರ್ ಧ್ವಜ ಬೇರೆ ಬೇರೆ ಧ್ವಜ ಹಾಕ್ತೀವಿ ಎಂದು ಮನವಿ ಮಾಡಿದ್ದಾರೆ. ಸರ್ಕಾರ ಆಗಿ ನಾವು ಏನು ಮಾಡಬಹುದು? ಎಂದು ಪ್ರಶ್ನಿಸಿದರು.
ಬಿಜೆಪಿ-ಜೆಡಿಎಸ್ ರಾಜ್ಯಮಟ್ಟದ ಪ್ರತಿಭಟನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ಮಾಡಲಿ. ಸರ್ಕಾರ ವೀಕ್ ಆಗಿಲ್ಲ. ನಾವು ಅದನ್ನು ಹ್ಯಾಂಡಲ್ ಮಾಡುತ್ತೇವೆ. ಬಿಜೆಪಿ-ಜೆಡಿಎಸ್ ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಅದು ಕಾನೂನು ಒಳಗೆ ಇದ್ದರೆ ನಾವು ಅವರನ್ನು ಮಾತನಾಡಿಸಲು ಹೋಗಲ್ಲ. ಕಾನೂನು ಬಿಟ್ಟು ಕೆಲಸ ಮಾಡಿದರೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಕೆ ಕೊಟ್ಟರು.