ತುಮಕೂರು : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಒಂದು ವೇಳೆ ಬಿವೈ ವಿಜಯೇಂದ್ರ ಅವರ ಸ್ಥಾನದಲ್ಲಿ ನಾನೇನಾದರೂ ಇದ್ದಿದ್ದರೆ ಕೂಡಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಅಮಾನತು ಮಾಡುತ್ತಿದ್ದೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ತಿಳಿಸಿದರು.
ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣ ಸೃಷ್ಟಿಯಾಗಿದೆ ಎಂದು ಬಿಜೆಪಿ ನಾಯಕರ ಆರೋಪಗಳಿಗೆ ಸಚಿವ ಕೆ ಎನ್ ರಾಜಣ್ಣ ಇದೀಗ ತಿರುಗೇಟು ನೀಡಿದ್ದಾರೆ. ಬಿಜೆಪಿ ತಟ್ಟೆಯಲ್ಲೆ ಹೆಗ್ಗಣ ಸತ್ತಿದೆ ನಮಗೆ ಹೇಳೋಕೆ ಬರುತ್ತಾರೆ. ನಾನು ವಿಜಯೇಂದ್ರ ಸ್ಥಾನದಲ್ಲಿ ಇದ್ದಿದ್ರೆ ಶಾಸಕ ಯತ್ನಾಳ್ ಅವರನ್ನು ಅಮಾನತು ಮಾಡುತ್ತಿದ್ದೆ. ವಿಜಯೇಂದ್ರ ಬಗ್ಗೆ ಯತ್ನಾಳ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ.ಇವರು ಒಂದು ಬಾರಿಯಾದರೂ ನೋಟಿಸ್ ಕೊಟ್ಟಿದ್ದಾರಾ? ನಮ್ಮಲ್ಲೂ ಶಿಸ್ತು ಸಮಿತಿ ಇರುತ್ತೆ ಅಲ್ವಾ? ನಮ್ಮಲ್ಲಿ ಭಿನ್ನಮತ ಇರಬಹುದು ಆದರೆ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಸಚಿವ
ಕೆಎನ್ ರಾಜಣ್ಣ ತಿಳಿಸಿದರು.
ಸಿಎಂ ಅಧಿಕಾರ ಅವಧಿ ಎರಡುವರೆ ವರ್ಷ ಅಂತ ಎಲ್ಲಿದೆ ಕೆಪಿಸಿಸಿಯಲ್ಲಿ ಏನಾದರೂ ಹೀಗೆ ಇದೆಯಾ ಹೈಕಮಾಂಡ್ ನಾಯಕರು ಸಹಿ ಮಾಡಿಕೊಟ್ಟಿದ್ದರಲ್ಲಿ ಇದೆಯಾ ನಮ್ಮ ಪಕ್ಷದಲ್ಲಿ ಎಲ್ಲೂ ಹೀಗೆ ಬರೆದಿಲ್ಲ ಹಾಗೆ ಹೇಳಿಯೂ ಇಲ್ಲ.ರಾಜ್ಯದಲ್ಲಿ ದಾವಣಗೆರೆ ಚಿತ್ರದುರ್ಗ ಅಥವಾ ಹುಬ್ಬಳ್ಳಿಯಲ್ಲಿ ದಲಿತ ಸಮಾವೇಶ ಮಾಡುವ ಉದ್ದೇಶ ಇದೆ. ಸಮಾವೇಶಕ್ಕೆ ಎಐಸಿಸಿ ನಾಯಕರಿಗೆ ಆಹ್ವಾನ ನೀಡಲಾಗುತ್ತೆ. ಕಾಂಗ್ರೆಸ್ ಪಕ್ಷದ ಅಡಿಯಲ್ಲಿಯೇ ಶೋಷಿತರ ಸಮಾವೇಶವನ್ನು ನಡೆಸಲಾಗುತ್ತದೆ ಮುಂದಿನ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಸಮಾವೇಶ ನಡೆಸಲು ಚಿಂತನೆ ನಡೆಯುತ್ತಿದೆ ಹೈಕಮಾಂಡ್ ನಾಯಕರನ್ನು ಒಪ್ಪಿಸಿಯೇ ಈ ಒಂದು ಸಮಾವೇಶ ನಡೆಸುತ್ತೇವೆ ಎಂದು ಕೆ ಎನ್ ರಾಜಣ್ಣ ತಿಳಿಸಿದರು.