ನ್ಯೂಯಾರ್ಕ್: ಜಗತ್ಪ್ರಸಿದ್ಧ ‘ಗ್ರ್ಯಾಂಡ್ ಥೆಫ್ಟ್ ಆಟೋ’ (GTA) ಗೇಮ್ ಸರಣಿಯ ತಯಾರಕ ಸಂಸ್ಥೆಯಾದ ರಾಕ್‌ಸ್ಟಾರ್ ಗೇಮ್ಸ್ (Rockstar Games) ಮೇಲೆ ನಡೆದ ಸೈಬರ್ ದಾಳಿ ಈಗ ಗಂಭೀರ ತಿರುವು ಪಡೆದಿದೆ. ಹ್ಯಾಕರ್ಸ್ ಬೇಡಿಕೆಯಿಟ್ಟಿದ್ದ ಹಣವನ್ನು (Ransom) ನೀಡಲು ಕಂಪನಿ ನಿರಾಕರಿಸಿದ ಬೆನ್ನಲ್ಲೇ, ಕಳವು ಮಾಡಲಾಗಿದ್ದ ಕಂಪನಿಯ ಅತ್ಯಂತ ರಹಸ್ಯ ದಾಖಲೆಗಳನ್ನು ಹ್ಯಾಕರ್ಸ್ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.
ಕಳೆದ ವಾರ ರಾಕ್‌ಸ್ಟಾರ್ ಗೇಮ್ಸ್‌ನ ಸರ್ವರ್‌ಗಳನ್ನು ಹ್ಯಾಕ್ ಮಾಡಿದ್ದ ಸೈಬರ್ ಕ್ರಿಮಿನಲ್‌ಗಳು, ಕಂಪನಿಯ ಆಂತರಿಕ ದಾಖಲೆಗಳು ಮತ್ತು ಗೇಮ್‌ಗಳ ಸೋರ್ಸ್ ಕೋಡ್‌ಗಳನ್ನು ಕಳವು ಮಾಡಿದ್ದರು. ಇದನ್ನು ವಾಪಸ್ ನೀಡಲು ಕೋಟ್ಯಂತರ ರೂಪಾಯಿ ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದರು.
ಹ್ಯಾಕರ್‌ಗಳ ಬೆದರಿಕೆಗೆ ಮಣಿಯದ ರಾಕ್‌ಸ್ಟಾರ್ ಗೇಮ್ಸ್, ಯಾವುದೇ ಹಣ ನೀಡಲು ನಿರಾಕರಿಸಿತ್ತು. ಇದರಿಂದ ಕೆರಳಿದ ಹ್ಯಾಕರ್ಸ್ ಈಗ ರಹಸ್ಯ ಮಾಹಿತಿಯನ್ನು ಸಾರ್ವಜನಿಕವಾಗಿ ಸೋರಿಕೆ ಮಾಡಿದ್ದಾರೆ.
ಸೋರಿಕೆಯಾದ ಮಾಹಿತಿಯಲ್ಲಿ ಏನಿದೆ?
ಬಹುನಿರೀಕ್ಷಿತ ‘ಜಿಟಿಎ 6’ ಗೇಮ್‌ಗೆ ಸಂಬಂಧಿಸಿದ ಆರಂಭಿಕ ಹಂತದ ವಿಡಿಯೋಗಳು ಮತ್ತು ಗೇಮ್ ಪ್ಲೇ ವಿವರಗಳು ಸೋರಿಕೆಯಾಗಿವೆ.ಗೇಮ್‌ನ ಬೆನ್ನೆಲುಬಾದ ‘ಸೋರ್ಸ್ ಕೋಡ್’ ಅನ್ನು ಹ್ಯಾಕರ್ಸ್ ಹಂಚಿಕೊಂಡಿದ್ದಾರೆ. ಇದರಿಂದ ಗೇಮ್‌ನ ಭದ್ರತೆಗೆ ದೊಡ್ಡ ಅಪಾಯ ಎದುರಾಗುವ ಸಾಧ್ಯತೆಯಿದೆ.
ಕಂಪನಿಯ ಕೆಲವು ಉದ್ಯೋಗಿಗಳ ವೈಯಕ್ತಿಕ ವಿವರಗಳು ಮತ್ತು ಕಂಪನಿಯ ಭವಿಷ್ಯದ ಯೋಜನೆಗಳ ದಾಖಲೆಗಳೂ ಇದರಲ್ಲಿ ಸೇರಿವೆ ಎಂದು ವರದಿಯಾಗಿದೆ.








