ಬೆಂಗಳೂರು: ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ತಮ್ಮ ಮೊಮ್ಮಗ ಮತ್ತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ರಾಜ್ಯವ್ಯಾಪಿ ಪ್ರವಾಸ ಕೈಗೊಳ್ಳುವುದಾಗಿ ಭಾನುವಾರ ಪ್ರಕಟಿಸಿದರು
ತಮ್ಮ ಪುತ್ರ ಮತ್ತು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಸಚಿವ ಜವಾಬ್ದಾರಿಗಳನ್ನು ಪೂರೈಸುವಲ್ಲಿ ನಿರತರಾಗಿದ್ದಾರೆ ಎಂದು ಗಮನಸೆಳೆದ ಗೌಡರು, ಜೆಡಿಎಸ್ ಯುವ ಘಟಕದ ಅಧ್ಯಕ್ಷರೂ ಆಗಿರುವ ನಿಖಿಲ್ ಅವರೊಂದಿಗೆ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದೇನೆ ಎಂದು ಹೇಳಿದರು. “ರಾಜ್ಯಾದ್ಯಂತ ಪಕ್ಷದ ಹಿರಿಯ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಒಮ್ಮತವನ್ನು ನಿರ್ಮಿಸುವಲ್ಲಿ ನಾನು ಮುಂದಾಳತ್ವ ವಹಿಸುತ್ತೇನೆ” ಎಂದು ಮಾಜಿ ಪ್ರಧಾನಿ ಹೇಳಿದರು.
ಮಾಜಿ ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಹಿರಿಯ ನಾಯಕರು ಪಕ್ಷಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಲ್ಲಿ ಗೈರು ಹಾಜರಾಗಿದ್ದು, ಪಕ್ಷದೊಳಗೆ ಅಸಮಾಧಾನ ಹೆಚ್ಚುತ್ತಿದೆ ಎಂಬ ವರದಿಗಳ ಮಧ್ಯೆ ಪಕ್ಷವನ್ನು ಪುನರುಜ್ಜೀವನಗೊಳಿಸುವಲ್ಲಿ ದೇವೇಗೌಡರು ಮುಂದಾಳತ್ವ ವಹಿಸುವ ನಿರ್ಧಾರ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಜೆಡಿಎಸ್ ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಸಲು ನೆರವಾಗುವ ಪ್ರವಾಸಕ್ಕೆ ಕಾಲ ಪಕ್ವವಾಗಿದೆ ಎಂದು ಗೌಡರು ಹೇಳಿದರು. ಮಾಜಿ ಪ್ರಧಾನಿ ಅವರು ಬೆಂಗಳೂರು ನಗರದಲ್ಲಿಯೂ ಪ್ರವಾಸ ಮಾಡುವುದಾಗಿ ಹೇಳಿದರು