ಜುನಾಗಢ್: ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ ಯಾತ್ರಾರ್ಥಿಗಳಿದ್ದ ಬಸ್ ಒಂದು ಪಲ್ಟಿಯಾದ ಪರಿಣಾಮ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 15 ಜನರು ಗಾಯಗೊಂಡಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಸುಮಾರು 40 ಪ್ರಯಾಣಿಕರಿದ್ದ ಈ ಬಸ್ ಭಾವನಗರದಿಂದ ದ್ವಾರಕಾ ಮತ್ತು ಸೋಮನಾಥದಂತಹ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಪ್ರಯಾಣಿಸುತ್ತಿತ್ತು. ಮಧ್ಯಾಹ್ನ ಸುಮಾರು 3 ಗಂಟೆಯ ಹೊತ್ತಿಗೆ ಮಾಂಗ್ರೋಲ್ ಸಮೀಪದ ರಹಿಜ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಬಸ್ ಚಲಿಸುತ್ತಿದ್ದಾಗ ಹಠಾತ್ತಾಗಿ ನೀಲಗಾಯ್ (ಕಾಡುಪ್ರಾಣಿ) ಒಂದು ರಸ್ತೆಗೆ ಅಡ್ಡ ಬಂದಿದೆ. ಈ ವೇಳೆ ಪ್ರಾಣಿಯನ್ನು ತಪ್ಪಿಸಲು ಹೋದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಬಸ್ ರಸ್ತೆಯಲ್ಲೇ ಪಲ್ಟಿಯಾಗಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತುರ್ತು ಸೇವೆಗಳು ಸ್ಥಳಕ್ಕೆ ಬರುವ ಮುನ್ನವೇ ಸ್ಥಳೀಯ ನಿವಾಸಿಗಳು ಧಾವಿಸಿ ಬಂದು ರಕ್ಷಣಾ ಕಾರ್ಯದಲ್ಲಿ ನೆರವಾಗಿದ್ದಾರೆ.ಬಸ್ಸಿನ ಅಡಿಯಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆಯಲು ರಕ್ಷಣಾ ತಂಡಗಳು ಎಕ್ಸ್‌ಕವೇಟರ್ (ಜೆಸಿಬಿ) ನಂತಹ ಭಾರೀ ಯಂತ್ರೋಪಕರಣಗಳನ್ನು ಬಳಸಬೇಕಾಯಿತು.
ಗಾಯಾಳುಗಳನ್ನು ತಕ್ಷಣವೇ ಜುನಾಗಢ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಇನ್ನೂ ನಡೆಯುತ್ತಿದೆ.








