ಹಾಸನ : “ಗ್ಯಾರಂಟಿ ಯೋಜನೆಗಳಿಂದ ಒಂದು ಬಡ ಕುಟುಂಬಕ್ಕೆ ವಾರ್ಷಿಕ 50-60 ಸಾವಿರ ಉಳಿತಾಯವಾಗುತ್ತಿದೆ. ಐದು ಗ್ಯಾರಂಟಿ ಯೋಜನೆಗಳ ಹೊರತಾಗಿ ವಿವಿಧ ಅಭಿವೃದ್ಧಿಗೆ ರಾಜ್ಯ ಸರ್ಕಾರ ರೂ.1.20 ಸಾವಿರ ಕೋಟಿ ಹಣವನ್ನು ಬಜೆಟ್ ನಲ್ಲಿ ಮೀಸಲಿಟ್ಟಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಹಾಸನದಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು “1.56 ಕೋಟಿ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ನೀಡುವುದರ ಜೊತೆಗೆ 1.50 ರುಪಾಯಿ ವಿದ್ಯುತ್ ದರ ಇಳಿಸಿದ್ದೇವೆ. ಇದಕ್ಕೆ ವಿರೋಧ ಪಕ್ಷಗಳು ಏನು ಹೇಳುತ್ತವೆ. ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದ್ದ ಕುಮಾರಸ್ವಾಮಿ, ಆರ್. ಅಶೋಕ್ ಅವರು ಇದಕ್ಕೆ ಉತ್ತರಿಸಲಿ ಎಂದರು.
ವಸ್ತುಗಳ ಬೆಲೆ ಏರಿಕೆಯಾಗಿತ್ತು. ಬಿಜೆಪಿಯವರು ವಿದ್ಯುತ್ ಬೆಲೆ ಏರಿಕೆ ಮಾಡಿದ್ದರು. ನಾವು ಉಚಿತವಾಗಿ ವಿದ್ಯುತ್ ನೀಡುವುದರ ಜೊತೆಗೆ ಬೆಲೆ ಇಳಿಕೆ ಮಾಡಿದ್ದೇವೆ. ಗೃಹಲಕ್ಷ್ಮೀ ಯೋಜನೆಯಿಂದ ಅತ್ತೆ-ಸೊಸೆ ಜಗಳವಾಡುತ್ತಾರೆ ಎಂದು ಗುಲ್ಲೆಬ್ಬಿಸಿದರು. ಯಾವುದಾದರೂ ಮನೆಯಲ್ಲಿ ಜಗಳ ಉಂಟಾಗಿದೆಯೇ? ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು “ಶಕ್ತಿ ಯೋಜನೆಯಿಂದ ದೇವಸ್ಥಾನಕ್ಕೆ ಜನ ಹೆಚ್ಚು ಬರುತ್ತಿದ್ದಾರೆ. ಹುಂಡಿ ತುಂಬಿ ತುಳುಕುತ್ತಿದೆ. ಸಿದ್ದರಾಮಯ್ಯ ಅವರ ಮತ್ತು ಡಿ.ಕೆ.ಶಿವಕುಮಾರ್ ಅವರ ಹೆಸರಿನಲ್ಲಿ ಮಹಿಳೆಯರು ಅರ್ಚನೆ ಮಾಡಿಸುತ್ತಿದ್ದಾರೆ” ಎಂದು ಪತ್ರ ಬರೆದಿದ್ದರು ಎಂದರು.
ಜನರ ಪ್ರಾರ್ಥನೆ ಎಂದಿಗೂ ಮೋಸ ಮಾಡುವುದಿಲ್ಲ. ಮಹಿಳೆಯರು ರಾಜ್ಯದ ನಾನಾ ದೇವಸ್ಥಾನಗಳನ್ನು ನೋಡುತ್ತಿದ್ದಾರೆ. ಮಕ್ಕಳನ್ನು ಕರೆದುಕೊಂಡು ಹೋಗಿ ದರ್ಶನ ಮಾಡಿಸುತ್ತಿದ್ದಾರೆ. ತವರು ಮನೆಗೆ ಹೋಗಿ ಬರುತ್ತಿದ್ದಾರೆ. ನಮ್ಮ ಯೋಜನೆಗಳಿಂದ ಆರ್ಥಿಕತೆಗೆ ಉತ್ತೇಜನ ನೀಡಲಾಗಿದೆ. ದುಡ್ಡು ಮತ್ತು ಬ್ಲಡ್ ಎರಡೂ ಚಲಾವಣೆಯಲ್ಲಿ ಇರಬೇಕು. ದುಡ್ಡು ಒಂದೇ ಕಡೆ ಇದ್ದರೆ ಕಳ್ಳರ, ಆದಾಯ ತೆರಿಗೆ ಅಧಿಕಾರಿಗಳ ಭಯ. ಬ್ಲಡ್ ಒಂದೇ ಕಡೆ ಇದ್ದರೆ ಅನಾರೋಗ್ಯ ಉಂಟಾಗುತ್ತದೆ ಎಂದರು.
ನಾವು ಧರ್ಮವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದಿಲ್ಲ. ದೇವರು ಬೇರೆ, ರಾಜಕಾರಣ ಬೇರೆ. ಈ ಬಾರಿಯ ಸದನದಲ್ಲಿ ನಮ್ಮ ಸರ್ಕಾರ ಸಣ್ಣ ದೇವಸ್ಥಾನಗಳ ಅಭಿವೃದ್ಧಿಗೆ ಮತ್ತು ಅರ್ಚಕರಿಗೆ ಸಹಾಯ ಮಾಡುವ ಕಾನೂನು ತರಲು ಹೊರಟೆವು. ಆದರೆ ಬಿಜೆಪಿಯವರು ಅದಕ್ಕೆ ವಿರೋಧಿಸಿದರು. ಪ್ರತಿ ಗ್ರಾಮದಲ್ಲಿ ಇರುವ ಹನುಮಂತ, ಮಾರಮ್ಮ ಸೇರಿದಂತೆ ಸಣ್ಣ ದೇವಾಲಯಗಳನ್ನು ಅಭಿವೃದ್ಧಿ ಮಾಡಲು ಕಾನೂನು ತಂದರೆ ವಿರೋಧಿಸಿದರು. ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ ಅಂದರೆ ಅರ್ಚಕನ ಪ್ರಭಾವ ಮತ್ತು ಸಂಸ್ಕಾರದಿಂದ ಶಿಲೆಯಾದ ಮೂರ್ತಿ ಶಂಕರನಾಗುತ್ತೆ. ಇಂತಹ ಅರ್ಚಕರ ಅಭಿವೃದ್ಧಿಗೆ ತಡೆಯೊಡ್ಡಿದರು ಬಿಜೆಪಿಗರು.
ನಮಗೆ ಜಾತಿ ಮುಖ್ಯವಲ್ಲ ನೀತಿ ಮುಖ್ಯ. ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಭಾವನೆಗಳ ಮೇಲೆ ಅಲ್ಲ. ನಾವು ಕೇವಲ ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಮಾತ್ರ ಯೋಜನೆಗಳನ್ನು ನೀಡಿಲ್ಲ. ಎಲ್ಲರಿಗೂ ನೀಡಿದ್ದೇವೆ ಎಂದು ಹೇಳಿದರು.
ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಸಹಕಾರಿ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡಿದ್ದೆವು. ಆದರೆ ಆ ಹಣ ಬಿಡುಗಡೆಯಾಗಿರಲಿಲ್ಲ. ಸಿಎಂ ಮತ್ತು ರಾಜಣ್ಣ ಅವರ ಕಾಳಜಿಯಿಂದ ಈ ಹಣ ಬಿಡುಗಡೆ ಮಾಡಿ ಸಹಕಾರಿ ಸಂಘ ಮತ್ತು ರೈತರಿಗೆ ಬೆನ್ನೆಲುಬಾಗಿದ್ದೇವೆ. ನಿಮ್ಮ ಸೇವೆಗೆ ನಾವು ಸದಾ ಸಿದ್ಧ. ಉತ್ತಮವಾದ ಅಧಿಕಾರ ನೀಡುತ್ತೇವೆ. ಮುಂದಕ್ಕೂ ನೀವು ನಮ್ಮ ಕೈ ಹಿಡಿಯುತ್ತೀರಾ ಎಂದು ನಂಬಿದ್ದೇವೆ. ಬಡವರ ಪರವಾಗಿ ನಾವು ಹೋರಾಟ ಮಾಡುತ್ತೇವೆ. ಬಡತನದ ವಿರುದ್ದ ಹೋರಾಟ ಮಾಡುತ್ತೇವೆ. ಇಂದಿರಾಗಾಂಧಿ, ದೇವರಾಜ ಅರಸು, ಬಂಗಾರಪ್ಪ ಅವರ ಕಾಲದಲ್ಲಿ ಜನರಿಗೆ ಮನೆ, ಭೂಮಿಯನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ನಾವು ನುಡಿದಂತೆ ನಡೆದಿದ್ದೇವೆ ಎಂದರು.
ಶಿವಲಿಂಗೇಗೌಡರಿಗೆ ಬಂಪರ್ ಹೊಡೆದಿದೆ
ಹಾಸನ ಜಿಲ್ಲೆಯ ಜನಪ್ರತಿನಿಧಿಗಳು ಒಂದಷ್ಟು ಅನುದಾನಗಳ ಬಿಡುಗಡೆಗೆ ಮನವಿ ಸಲ್ಲಿಸಿದ್ದಾರೆ. ಇದರಲ್ಲಿ ನಮ್ಮ ಶಿವಲಿಂಗೇಗೌಡರು ಬಂಪರ್ ಹೊಡೆದಿದ್ದಾರೆ. ಈ ವರ್ಷ ಮಳೆ ಬಿದ್ದು ನೀರು ಬಂದರೆ, ಎತ್ತಿನಹೊಳೆ ಮೂಲಕ ಎಲ್ಲಾ ಕೆರೆಗಳನ್ನು ತುಂಬಿಸುವ ಕೆಲಸವಾಗುತ್ತದೆ. ನಿಮ್ಮೆಲ್ಲರ ಮತ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಯಿತು. ಹಾಸನದ ಕಾರ್ಯಕ್ರಮಕ್ಕೆ ಬರಲೇ ಬೇಕು ಎಂದು ಶಿಮ್ಲಾದಿಂದ ರಾತ್ರೋರಾತ್ರಿ ನಿಮ್ಮನ್ನು ನೋಡಲು ಬಂದಿದ್ದೇನೆ. ಪ್ರತಿ ವರ್ಷ ನಾನು ಹಾಸನಾಂಭ ದೇವಿಯ ದರ್ಶನ ಮಾಡತ್ತೇನೆ. ನಮ್ಮ ಸರ್ಕಾರ ಬಂದ ಹೊಸತರಲ್ಲಿ ಸಚಿವರಾದ ಕೆ.ಎನ್.ರಾಜಣ್ಣ ಅವರ ನೇತೃತ್ವದಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಮಾಡಿದರು ಎಂದರು.
ನಿಂಬೆಗಿಂ ಹುಳಿಯಿಲ್ಲ, ತುಂಬೆಗಿಂ ಕರಿದಿಲ್ಲ, ನಂಬಿಗೆಯಿಂದಧಿಕ ಗುಣವಿಲ್ಲ, ದೈವವುಂ ಶುಭವಿಂದಿಲ್ಲ
ಈ ವಚನದ ಆಶಯದಂತೆ ನಾವೆಲ್ಲಾ ನಡೆಯಬೇಕು.
ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು.
ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು.
ಇದನ್ನು ನೋಡಿದ ಕುಮಾರಣ್ಣ ತೆನೆ ಕಿತ್ತು ಎಸೆದು ಕಮಲ ತಬ್ಬಿಕೊಂಡರು.
ಅದಕ್ಕೆ ನಾನು ಪದೇ, ಪದೇ ಈ ಮಾತನ್ನು ಹೇಳುತ್ತೇನೆ.
ಕಮಲ ಕೆರೆಯಲ್ಲಿ ಇದ್ದರೆ ಚೆಂದ, ದಾನ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ ಎಂದರು.
BIG UPDATE: ಬೆಂಗಳೂರಿನ ‘ರಾಮೇಶ್ವರ ಕಫೆ’ ಸ್ಪೋಟ ಪ್ರಕರಣ: ‘9 ಜನ’ರಿಗೆ ಗಾಯ – ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾಹಿತಿ
ರಾಜ್ಯ ಸರ್ಕಾರದಿಂದ ‘ಗೃಹ ಜ್ಯೋತಿ ಯೋಜನೆ’ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ | Gruha Jyothi Scheme