ತುಮಕೂರು: ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಬಂದ ಮೇಲೆ ನಮ್ಮ ಇಲಾಖೆ ಮುಂಚೂಣಿಯಲ್ಲಿದೆ. ಮಹಿಳೆಯರ ಸಬಲೀಕರಣವೇ ನಮ್ಮ ಸರ್ಕಾರದ ಗುರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಂಗಳೂರಿನಲ್ಲಿ ನವೆಂಬರ್ 28 ರಂದು ನಡೆಯಲಿರುವ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಗೆ ಚಾಲನೆ ಕುರಿತು ಬಾಲ ಭವನದಲ್ಲಿ ನಡೆದ ಜಿಲ್ಲಾಮಟ್ಟದ ಪೂರ್ವಭಾವಿ ಸಭೆಯಲ್ಲಿ ಸಚಿವರು ಮಾತನಾಡಿದರು.
ಬಹುನಿರೀಕ್ಷಿತ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ತುಮಕೂರು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಪರಮೇಶ್ವರ್ ಸಹಕಾರ ಸ್ಮರಿಸಿದ ಸಚಿವರು
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ತುಮಕೂರಿನವರೇ ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಸಹಕಾರದಿಂದ ಇಂದು ನಾನು ಸಚಿವೆಯಾಗಿರುವೆ. ಪರಮೇಶ್ವರ್ ಅವರು ನನಗೆ ನಾಲ್ಕು ಬಾರಿ ಬಿ ಫಾರ್ಮ್ ಕೊಟ್ಟಿದ್ದಾರೆ. ಅವರ ಸಹಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಸಚಿವರು ಸ್ಮರಿಸಿದರು.
ಮಂತ್ರಿಯಾದ ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಬದಲಾವಣೆ ತರಬೇಕು, ಶಿಸ್ತು ತರಬೇಕು ಅಂತ ಕೆಲಸ ಮಾಡುತ್ತಿರುವೆ. ಎಲ್ಲರ ಸಹಕಾರದಿಂದ ಇಂದು ನಮ್ಮ ಇಲಾಖೆ ಮನೆ ಮನೆಗೆ ಹೆಸರಾಗಿದೆ. ಮೊದಲು ಕೆಡಿಪಿ ಸಭೆಗಳಲ್ಲಿ ನಮ್ಮ ಇಲಾಖೆ ಚರ್ಚೆ ಕೊನೆಯಲ್ಲಿ ಇರುತ್ತಿತ್ತು, ಈಗ ಗೃಹಲಕ್ಷ್ಮಿ ಯೋಜನೆ ಬಂದ್ಮೇಲೆ ಮೊದಲ ಸ್ಥಾನದಲ್ಲಿದೆ ಎಂದರು.
ಎಫ್ ಆರ್ ಎಸ್ ಸಿಸ್ಟಮ್ ನಲ್ಲಿ ಶೇಕಡ 99ರಷ್ಟು ಜಾರಿಗೆ ತಂದ ಕೀರ್ತಿ ತುಮಕೂರಿಗೆ ಸಲ್ಲುತ್ತದೆ. ಕರ್ನಾಟಕ ಯಾವತ್ತು ಮಾಡೆಲ್ ಆಗಿಯೇ ಕೆಲಸ ಮಾಡುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಕಾರಣ. ತುಮಕೂರಿನಿಂದ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ನಾಲ್ಕು ಷೇರುದಾರರನ್ನು ನೋಂದಾಯಿಸಬೇಕು ಎಂದು ಸಚಿವರು ಕರೆ ನೀಡಿದರು.
ನಮ್ಮ ಇಲಾಖೆ ಸಾಮಾಜಿಕ ಬದ್ಧತೆಯ ಜೊತೆಗೆ ಮನುಷ್ಯತ್ವವನ್ನು ಕೊಡುತ್ತದೆ. ಅನುಕಂಪದಿಂದ ಹೃದಯದಿಂದ ಕೆಲಸ ಮಾಡುತ್ತೇವೆ, ಅದಕ್ಕಾಗಿ ಮಹಿಳೆಯರಿಗೆ ಈ ಇಲಾಖೆಯನ್ನು ಕೊಡಲಾಗಿದೆ. ಕೇಂದ್ರದಲ್ಲಿ ಎನ್ ಡಿಎ ಸರ್ಕಾರವಿದ್ದರೂ ಕೇಂದ್ರದಿಂದ ಅತಿಹೆಚ್ಚು ಅನುದಾನ ತಂದಿರುವುದು ನಾನು. ಪ್ರತಿಯೊಂದು ಗ್ರಾಮದಲ್ಲಿ ಅಂಗನವಾಡಿ ಕಟ್ಟಡಗಳನ್ನು ಕಟ್ಟಲಾಗಿದೆ ಎಂದರು.
ಖಾಸಗಿ ನರ್ಸರಿಗಳಿಗೆ ಸಾವಿರಾರು ರೂಪಾಯಿ ಕಟ್ಟಬೇಕು. ಬಡ ಮಕ್ಕಳಿಗೆ ತಳಹದಿಯಲ್ಲಿ ಉತ್ತಮ ಶಿಕ್ಷಣ ನೀಡುವ ಸಲುವಾಗಿ ನಮ್ಮ ಇಲಾಖೆಯಿಂದಲೇ ಎಲ್ ಕೆಜಿ ಯುಕೆಜಿ ಆರಂಭಿಸಲಾಗುತ್ತಿದೆ. ನಮ್ಮ ಇಲಾಖೆಯಲ್ಲಿ 15000 ಕಾರ್ಯಕರ್ತೆಯರು ಪದವೀಧರಾಗಿದ್ದಾರೆ. ಇವರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಅಕ್ಕಪಡೆ ಆರಂಭಿಸಲಾಗುತ್ತಿದ್ದು, ಗಸ್ತು ವಾಹನದಲ್ಲಿ 5 ರಿಂದ 10 ಮಹಿಳೆಯರು ಇರ್ತಾರೆ, ಇಬ್ಬರು ಮಹಿಳಾ ಪೊಲೀಸರು ಇರಲಿದ್ದಾರೆ. ಒಟ್ಟು 31 ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿ ಅಕ್ಕಪಡೆ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ಹೇಳಿದರು.
ಮಹಿಳೆಯರ ಸಬಲೀಕರಣಕ್ಕೆ ಸ್ತ್ರೀ ಶಕ್ತಿ ನಾಂದಿ
ಕರ್ನಾಟಕದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಮೋಟಮ್ಮ ಅವರು ಸಚಿವರಾಗಿದ್ದಾಗ ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿ, ಮಹಿಳೆಯರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಇದೀಗ ನನ್ನ ಹೃದಯಕ್ಕೆ ಹತ್ತಿರವಾಗಿರುವ ಗೃಹಲಕ್ಷ್ಮಿ ಬ್ಯಾಂಕ್ ತರಲಾಗುತ್ತಿದೆ ಎಂದರು.
ಈ ಹಿಂದೆ ಗಂಡನ ಉದ್ಯಮದಲ್ಲಿ ಹೆಂಡತಿ ಕೈಜೋಡಿಸುತ್ತಿದ್ದಳು. ಆದರೆ, ಇತ್ತೀಚೆಗೆ ಮಹಿಳೆಯರೆ ಉದ್ಯಮಿಗಳಾಗುತ್ತಿದ್ದಾರೆ. ಇಂತಹ ಮಹಿಳೆಯರಿಗೆ ಸಹಾಯ ಮಾಡುವ ಉದ್ದೇಶದಿಂದಲೇ ಗೃಹಲಕ್ಷ್ಮಿ ಬ್ಯಾಂಕ್ ಆರಂಭಿಸಲಾಗುತ್ತಿದೆ. ಧರ್ಮಸ್ಥಳ ಸ್ವ ಸಹಾಯ ಸಂಘ ಕಳೆದ 20 ವರ್ಷಗಳಿಂದ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಅವರ ಸೇವೆ ಸದಾ ಸ್ಮರಣೀಯ. ಆದರೆ ಕೆಲವೊಂದು ಖಾಸಗಿ ಫೈನಾನ್ಸ್ ಕಂಪನಿಗಳಿಂದ ಜನರಿಗೆ ತೊಂದರೆಯಾಗುತ್ತಿದೆ. ಇದನ್ನು ತಡೆಗಟ್ಟಲು ಗೃಹಲಕ್ಷ್ಮಿ ಸಂಘ ಸಹಾಯವಾಗಲಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಗೃಹಲಕ್ಷ್ಮಿ ಸಂಘಕ್ಕೆ ಸೇರ ಬಯಸುವವರಿಗೆ ಯಾವುದೇ ಒತ್ತಡ ಇಲ್ಲ. ಬ್ಯಾಂಕ್ ಗೆ ಸೇರ ಬಯಸುವವರು ಸಾವಿರ ರೂಪಾಯಿ ಕೊಟ್ಟು ಶೇರ್ ಹೋಲ್ಡರ್ ಆಗಬೇಕು. ಸಂಪೂರ್ಣ ಕ್ಯಾಶ್ ಲೆಸ್ ವ್ಯವಹಾರ ನಡೆಯಲಿದ್ದು, ಷೇರುದಾರರಾದ ಬಳಿಕ ಪ್ರತಿ ತಿಂಗಳು ಇನ್ನೂರು ರೂಪಾಯಿ ಕಟ್ಟಬೇಕು, ಆರು ತಿಂಗಳಲ್ಲಿ ಲೋನ್ ಪಡೆಯಬಹುದು, ಮೂವತ್ತು ಸಾವಿರದಿಂದ ಮೂರು ಲಕ್ಷದವರೆಗೂ ಸಾಲ ನೀಡಲಾಗುವುದು. ಗೃಹಲಕ್ಷ್ಮಿ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ಮಾತ್ರ ನೀಡಲಾಗುವುದು, ಗುಂಪು, ಸಂಘಗಳಿಗೆ ಸಾಲ ನೀಡಲಾಗುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳ ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಇದು ಇಡೀ ವಿಶ್ವದಲ್ಲೇ ದಾಖಲೆಯಾಗಿ ಉಳಿಯಲಿದೆ. ಬ್ಯಾಂಕ್ ಬಗ್ಗೆ ಇಂಥಹ ಪರಿಕಲ್ಪನೆಯನ್ನು ಇಟ್ಟುಕೊಂಡಿರುವೆ ಎಂದರು.
ಮುಂದೆ ಯಾವುದೇ ಸರ್ಕಾರಗಳು ಬಂದರೂ ಗೃಹಲಕ್ಷ್ಮಿ ಬ್ಯಾಂಕ್ ಅನ್ನು ಮುಚ್ಚುವ ಪ್ರಯತ್ನ ಮಾಡುವುದಿಲ್ಲ. ಇದು ನಿರಂತರ ಪ್ರಕ್ರಿಯೆ. ಮಹಿಳೆಯರಿಗೆ ಅನುಕೂಲ ಆಗುವ ದೃಷ್ಟಿಯಿಂದ ಬ್ಯಾಂಕ್ ತೆರೆಯಲಾಗುತ್ತಿದ್ದು, ಕೃಷಿ, ಹೈನುಗಾರಿಕೆ, ವಾಹನ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ವಿವಿಧ ರೀತಿಯಲ್ಲಿ ಲೋನ್ ತೆಗೆದುಕೊಳ್ಳಬಹುದು ಎಂದರು.
ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳಕ್ಕೆ ಕ್ರಮ
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನವನ್ನು ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಒಂದು ಸಾವಿರ ಗೌರವ ಧನ ಹೆಚ್ಚಿಸಲಾಗುವುದು. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಚುನಾವಣಾ ಕೆಲಸದಿಂದ ವಿಮುಕ್ತಿಗೊಳಿಸಲಾಗಿದೆ. ಜಾತಿ ಸಮೀಕ್ಷೆಗೆ ಅಂಗನವಾಡಿ ಕಾರ್ಯಕರ್ತೆಯರು ಸಹಾಯ ಮಾಡಿದರು. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ವೇಳೆ ತುಮಕೂರು ನಗರದ ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಗ್ಯಾರಂಟಿ ಯೋಜನೆಯ ವಿವಿಧ ತಾಲೂಕಿನ ಅಧ್ಯಕ್ಷರಾದ ಚಂದ್ರಶೇಖರ್, ವೆಂಕಟೇಶ್ ಮೂರ್ತಿ, ಚಂದ್ರಕಲಾ, ಕುಮುದಾ ಹರೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಸಿದ್ದರಾಮಣ್ಣ, ನಿರೂಪಣಾಧಿಕಾರಿ ಅಂಬಿಕಾ, ಇಲಾಖೆಯ ಅಧಿಕಾರಿಗಳು, ನೂರಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು..
ಮಂಡ್ಯ: ವಿದ್ಯಾರ್ಥಿಗಳು ಅಂಕಗಳ ಬೆನ್ನು ಹತ್ತದೇ ಕೌಶಲ್ಯಯುತ ಜ್ಞಾನ ಪಡೆದುಕೊಳ್ಳಿ- ರೈತ ಕವಿ ದೊ.ಚಿ.ಗೌಡ
ಪ್ರಿಯಾಂಕ್ ಖರ್ಗೆ ಸುಳ್ಳುಗಳನ್ನು ಹೇಳುವುದರಲ್ಲಿ ನಿಸ್ಸೀಮ: ಛಲವಾದಿ ನಾರಾಯಣಸ್ವಾಮಿ








