ಬೆಂಗಳೂರು : ಹಸಿರು ಪಟಾಕಿಯಲ್ಲಿ ರಾಸಾಯನಿಕ ಅಂಶ ಇರುವುದಿಲ್ಲ, ಕಣ್ಣು, ಮೈಕೈ ಭಾಗಕ್ಕೆ ಹಾನಿಯಾಗುವುದಿಲ್ಲ ಎಂಬ ತಪ್ಪು ಕಲ್ಪನೆಗಳಿವೆ, ಆದರೆ ತಜ್ಞರ ಪ್ರಕಾರ ಹಸಿರು ಪಟಾಕಿಯಿಂದ ಕೂಡ ಸಾಕಷ್ಟು ಅಪಾಯಗಳಿದೆಯಂತೆ. ಹಸಿರು ಪಟಾಕಿ ಹೆಸರಲ್ಲಿ ಸಾಮಾನ್ಯ ಪಟಾಕಿಯೇ ಹೆಚ್ಚು ಮಾರಾಟವಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ.
ಹಸಿರು ಪಟಾಕಿಗಳು ಮಾಲಿನ್ಯ ಕಡಿಮೆ ಮಾಡಬಹುದೇ ಹೊರತು ಕಣ್ಣಿನ ಹಾನಿ ಪ್ರಮಾಣವಲ್ಲ. ಹಸಿರು ಪಟಾಕಿಗಳು ಸಿಡಿದಾಗ ಬರುವ ಬೆಂಕಿ ಕಿಡಿ, ಉಷ್ಣ ಪ್ರಮಾಣ ಸಾಮಾನ್ಯ ಪಟಾಕಿಯಂತೆಯೇ ಇರುತ್ತದೆ. ಸಿಡಿದಾಗ ರಾಸಾಯನಿಕಗಳು ಕಣ್ಣಿಗೆ ಸೇರಿದರೆ ದೃಷ್ಟಿಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಹೀಗಾಗಿ, ಹಸಿರು ಪಟಾಕಿಯಿಂದ ಯಾವುದೇ ತರಹದ ಹಾನಿಯಾಗುವುದಿಲ್ಲಎಂಬ ತಪ್ಪು ಕಲ್ಪನೆ ಬೇಡ ಎನ್ನುತ್ತಾರೆ ನುರಿತ ನೇತ್ರ ತಜ್ಞರು.
ಅದೇ ರೀತಿ ಮಿಂಟೋ ಕಣ್ಣಾಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಎಚ್ಚರಿಕೆ ನೀಡಿದ್ದು, ದೀಪಾವಳಿ ಸಂಭ್ರಮ ಭರದಲ್ಲಿ ʼಹಸಿರು ಪಟಾಕಿ ʼ ಹಚ್ಚೋ ಬಗ್ಗೆ ನಿರ್ಲಕ್ಷ್ಯಿಸದಿರಿ ಎಂದು ಸಿಲಿಕಾನ್ ಸಿಟಿಯ ಪ್ರಸಿದ್ಧ ಕಣ್ಣಿನ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ದೇಶದಲ್ಲಿ ದೀಪಗಳ ಹಬ್ಬ ದೀಪಾವಳಿ ಸಂಭ್ರಮ ಭರದಿಂದ ಸಿದ್ಧತೆ ನಡೆಸಲಾಗುತ್ತಿದೆ. ದೀಪಾವಳಿ ಹಬ್ಬದ ಭರದಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಪಟಾಕಿ ಹಚ್ಚೋವಾಗ ಹಸಿರು ಪಟಾಕಿಯ ಬಳಕೆಯಿಂದ ಯಾವುದೇ ಅನಾಹುತ ಎದುರಾಗಲ್ಲ ಅನ್ನೋದು ಮಾತಿಗೆ. ಯಾವುದೇ ಕಾರಣಕ್ಕೂ ಹಸಿರು ಪಟಾಕಿ ಬಳಕೆಯ ಬಗ್ಗೆಯೂ ನಿರ್ಲಕ್ಷ್ಯಿಸದಿರಿ..
ಹಸಿರು ಪಟಾಕಿಯಿಂದ ಹೆಚ್ಚು ಹಾನಿಯಾಗದು ಎಂಬ ಮನೋಭಾವ ಬೇಡ. ಹಸಿರು ಪಟಾಕಿಗಳೂ ರಾಸಾಯನಿಕ ಒಳಗೊಂಡಿವೆ. ಇದರಿಂದ ಅಪಾಯವಿಲ್ಲಎಂದು ಯಾವುದೇ ಅಧ್ಯಯನ ತಿಳಿಸಿಲ್ಲ. ಹೀಗಾಗಿ, ಪಟಾಕಿ ಸಿಡಿಸುವಾಗ ಜಾಗರೂಕರಾಗಿರಬೇಕು ಎಂದು ಮಿಂಟೋ ಕಣ್ಣಾಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದ್ದಾರೆ.
ಪ್ರತಿ ವರ್ಷವೂ ದೀಪಾವಳಿ ಸಂದರ್ಭದಲ್ಲಿ ಸರಾಸರಿ 50ರಿಂದ 60 ಜನರು ಕಣ್ಣಿನ ಚಿಕಿತ್ಸ್ಸೆಗಾಗಿ ದಾಖಲಾಗುತ್ತಾರೆ. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕಣ್ಣಿಗೆ ತೊಂದರೆಯಾಗಿ ಆಸ್ಪತ್ರೆಗೆ ದಾಖಲಾಗುವವರಲ್ಲಿ 14 ವರ್ಷದೊಳಗಿನ ಮಕ್ಕಳು ಶೇ.40 ರಷ್ಟಿರುತ್ತಾರೆ. ಅದರಲ್ಲೂ, ಗಂಡುಮಕ್ಕಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿರುತ್ತದೆ ಎಂದರು.
ಇನ್ನು ಕಳೆದ ವರ್ಷ 40ಕ್ಕೂ ಅಧಿಕ ಮಂದಿ ಮಿಂಟೋ ಕಣ್ಣಾಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ12 ವರ್ಷದೊಳಗಿನವರು 12 ಮಂದಿ ಚಿಕಿತ್ಸೆಗೊಳಗಾಗಿದ್ದರು. ಇವರಲ್ಲಿಇಬ್ಬರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ಪಟಾಕಿ ಸಿಡಿಸುವಾಗ ಮೈ ಮರೆಯಬೇಡಿ. ಒಂದು ವೇಳೆ ಗಾಯಗೊಂಡರೂ ತಕ್ಷಣ ಪ್ರಾಥಮಿಕ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು. ಅಲ್ಲದೇ ದೀಪಾವಳಿ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಸ್ಪತ್ರೆಯ ವೈದ್ಯರು, ವೈದ್ಯಯೇತರ ಸಿಬ್ಬಂದಿಗಳು ರಜೆ ತೆಗೆದುಕೊಳ್ಳದೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು, ಜನರಲ್ಲಿ ಸಡಗರ ಮನೆ ಮಾಡಿದೆ. ಇನ್ನೂ, ದೀಪಾವಳಿ ಹಬ್ಬದ ವೇಳೆ ಸಂಭವಿಸಬಹುದಾಗ ಪಟಾಕಿ ಅವಘಡ ಅಗ್ಬಿ ದುರಂತ ಹಾಗೂ ಇತರ ಅನಾಹುತಗಳನ್ನು ತಡೆಗಟ್ಟಲು ಸರ್ಕಾರ ಹಲವು ಮಾರ್ಗಸೂಚಿ ಕೂಡ ಬಿಡುಗಡೆ ಮಾಡಿದೆ.
1) ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಮಳಿಗೆಗಳನ್ನು ನಿರ್ಮಿಸಲು ಉಪಯೋಗಿಸುವ ಸಾಮಗ್ರಿಗಳು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ರೀತಿ ಇರಬಾರದು.
2) ಪ್ರತಿಯೊಂದು ಮಳಿಗೆಯಲ್ಲಿ ಅಗ್ನಿನಂದಕ ಹಾಗೂ ಎರಡು ಬಕೆಟ್ಗಳಲ್ಲಿ ನೀರನ್ನು ಇಟ್ಟಿರಬೇಕು. ಪ್ರತಿಯೊಂದು ಮಳಿಗೆ ಪಕ್ಕದಲ್ಲಿ ಎರಡು ಡ್ರಮ್ನಲ್ಲಿ ಕನಿಷ್ಟ 400 ಲೀಟರ್ ನೀರನ್ನು ಶೇಖರಿಸಿಟ್ಟಿರಬೇಕು.
3) ಅನಧಿಕೃತ ಪಟಾಕಿ ಮಾರಾಟದ ವ್ಯವಹಾರವು ಗಮನಕ್ಕೆ ಬಂದರೆ ಕೂಡಲೇ ಸಂಬಂಧಪಟ್ಟ ಪರವಾನಿಗೆ ನೀಡುವ ಅಧಿಕಾರಿಗಳ ಗಮನಕ್ಕೆ ತರತಕ್ಕದ್ದು.
4) ಮಳಿಗೆಯಲ್ಲಿ ಧೂಮಪಾನಕ್ಕೆ ಅವಕಾಶ ನೀಡಬಾರದ ಹಾಗೂ ಸಂಬಂಧಿತ ಸೂಚನಾ ಫಲಕವನ್ನು ಹಾಕಿರಬೇಕು. ರಾತ್ರಿ ವೇಳೆ ಮಳಿಗೆಯಲ್ಲಿ ಯಾರೂ ಮಲಗಬಾರದೆಂದು ಸೂಚನೆ ನೀಡಬೇಕು.
5) ಅಗ್ನಿಶಾಮಕ ಠಾಣೆಯಲ್ಲಿ ಎಲ್ಲಾ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟಿರಬೇಕು ಹಾಗೂ ಯಾವುದೇ ಕರೆ ಬಂದರೆ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು. ದೀಪಾವಳಿ ಸಮಯದಲ್ಲಿ ಅಧಿಕಾರಿ/ ಸಿಬ್ಬಂದಿಗಳಿಗೆ ತುರ್ತು ಸಂದರ್ಭ ಹೊರತು ಪಡಿಸಿ ಯಾವುದೇ ರಜೆ, ವಾರದ ರಜೆಯನ್ನು ನೀಡಬಾರದು.
6) ಅಧಿಕಾರಿಗಳು ಹಾಗೂ ಕರ್ತವ್ಯದಲ್ಲಿನ ಸಿಬ್ಬಂದಿಗಳು ಸದಾ ಜಾಗರೂಕರಾಗಿರಬೇಕು. ಠಾಣೆಯನ್ನು ಬಿಟ್ಟು ಇತರೆ ಕೆಲಸಗಳಿಗೆ ಹೊರ ಹೋಗಬಾರದು ಹಾಗೂ ಸದಾ 24 ಗಂಟೆಗಳಲ್ಲೂ ಕರೆಗೆ ಹಾಜರಾಗಲು ಲಭ್ಯವಿರಬೇಕು ಎಂದು ಸೂಚನೆ ನೀಡಲಾಗಿದೆ.