ಬೆಂಗಳೂರು: ರಾಜ್ಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಸಿಹಿಸುದ್ದಿ ಸಿಕ್ಕಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 56,432 ನೇರ ನೇಮಕಾತಿ ಹುದ್ದೆಗಳನ್ನು ಮುಂದಿನ 30 ದಿನಗಳಲ್ಲಿ ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸರ್ಕಾರ ಆದೇಶಿಸಿದೆ. ಈ ಕುರಿತು ಶಾಸಕ ರವಿಕುಮಾರ್ ಗೌಡ (ಗಣಿಗ) ಅವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಉತ್ತರಿಸಿದ್ದಾರೆ.
ವಯೋಮಿತಿಯಲ್ಲಿ ಭಾರಿ ಸಡಿಲಿಕೆ: ನೇಮಕಾತಿ ವಿಳಂಬದಿಂದ ತೊಂದರೆ ಅನುಭವಿಸುತ್ತಿರುವ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಸರ್ಕಾರವು ಮಹತ್ವದ ತೀರ್ಮಾನ ಕೈಗೊಂಡಿದೆ. 31.12.2027ರವರೆಗೆ ಹೊರಡಿಸುವ ಎಲ್ಲಾ ನೇರ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗುವಂತೆ, ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.
ನೇಮಕಾತಿ ಪ್ರಕ್ರಿಯೆಗೆ ಚಾಲನೆ: ಮೀಸಲಾತಿ ಹೆಚ್ಚಳದ ವಿಚಾರವಾಗಿ ನ್ಯಾಯಾಲಯದಲ್ಲಿದ್ದ ಕಾನೂನು ತೊಡಕುಗಳಿಂದಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಆದರೆ ಈಗ ಸರ್ಕಾರವು ಹಳೆಯ 1995ರ ಆದೇಶದಂತೆ (ಶೇ. 50 ಮೀಸಲಾತಿ) ನೇಮಕಾತಿ ಮುಂದುವರಿಸಲು ನಿರ್ಧರಿಸಿದೆ. ಆದಾಗ್ಯೂ, ಭವಿಷ್ಯದಲ್ಲಿ ನ್ಯಾಯಾಲಯ ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟು ಶೇ. 6ರಷ್ಟು ಹುದ್ದೆಗಳನ್ನು (ಪರಿಶಿಷ್ಟ ಜಾತಿಗೆ ಶೇ. 2 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 4) ಕಾಯ್ದಿರಿಸಲು ಸೂಚಿಸಲಾಗಿದೆ.
ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು? (ಪ್ರಮುಖ ಇಲಾಖೆಗಳು): ಆರ್ಥಿಕ ಇಲಾಖೆಯು ಈಗಾಗಲೇ ಈ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿದ್ದು, ಪ್ರಮುಖ ಇಲಾಖಾವಾರು ವಿವರ ಹೀಗಿದೆ:
-
ಶಿಕ್ಷಣ ಇಲಾಖೆ: 10,807 ಹುದ್ದೆಗಳು
-
ಸಾರಿಗೆ ಇಲಾಖೆ: 9,756 ಹುದ್ದೆಗಳು (ಒಟ್ಟು)
-
ಇಂಧನ ಇಲಾಖೆ: 5,045 ಹುದ್ದೆಗಳು (ಒಟ್ಟು)
-
ನಗರಾಭಿವೃದ್ಧಿ ಇಲಾಖೆ: 3,265 ಹುದ್ದೆಗಳು (ಒಟ್ಟು)
-
ಆರೋಗ್ಯ ಮತ್ತು ಕುಟುಂಬ ಕಲ್ಯಾಣ: 2,829 ಹುದ್ದೆಗಳು (ಒಟ್ಟು)
-
ಗೃಹ ಇಲಾಖೆ: 1,959 ಹುದ್ದೆಗಳು (ಒಟ್ಟು)
ಕಳೆದ ಮೂರು ವರ್ಷಗಳಲ್ಲಿ ಈಗಾಗಲೇ 8,157 ಹುದ್ದೆಗಳ ನೇಮಕಾತಿ ಪೂರ್ಣಗೊಂಡಿದ್ದು, 3,081 ಹುದ್ದೆಗಳ ನೇಮಕಾತಿ ಪ್ರಗತಿಯಲ್ಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಬೆಂಗಳೂರಲ್ಲಿ ಸರ್ಕಾರಿ ಜಾಗ ಕಬಳಿಕೆ ವಿರುದ್ಧ ‘RBI ಬಡಾವಣೆ’ಯ ಕಲ್ಯಾಣ ಸಂಘ ಕಾನೂನು ಹೋರಾಟ
EPFO ಮಾಸ್ಟರ್ ಪ್ಲಾನ್: 10,181 ಕೋಟಿ ರೂ. ಹಕ್ಕು ಪಡೆಯದ ಹಣ ಪಾವತಿಗೆ ‘ಆಟೋ-ಸೆಟಲ್ಮೆಂಟ್’ ಫೀಚರ್ ಜಾರಿ!








