ಬೆಂಗಳೂರು: ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಿದ್ದೇ ಆದಲ್ಲಿ ಮುಂದಾಗೋ ಅನಾಹುತಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಗುಡುಗಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ದಕ್ಷಿಣ ಕನ್ನಡದಲ್ಲಿ ಕಾನೂನು- ಸುವ್ಯವಸ್ಥೆ ಸುಗಮವಾಗಿ ಹೋಗುತ್ತಿರುವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುವುದನ್ನು ಸಹಿಸಲು ಅಸಾಧ್ಯ ಎಂದು ಅವರು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ಪೊಲೀಸರು ಕಾನೂನು- ಸುವ್ಯವಸ್ಥೆ ಹದಗೆಡಲು ಕುಮ್ಮಕ್ಕು ನೀಡುತ್ತಿದ್ದಾರೆ. ಶಾಸಕರ ಮೇಲೆ ಕ್ರಮ ಸಲ್ಲದು; ವಿನಾಕಾರಣ ನಮ್ಮ ಕಾರ್ಯಕರ್ತರ ಮೇಲೆ ಎಫ್‍ಐಆರ್ ದಾಖಲಿಸಿದ್ದು, ಅವರನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.
ಇತ್ತೀಚೆಗೆ ಅಕ್ರಮ ಕ್ವಾರಿ ವಿಚಾರವಾಗಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ಈ ವಿಚಾರವಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಬಂಧನ ಮಾಡಲು ಪೊಲೀಸರು ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದು ತಿಳಿಸಿದರು. ಶಾಸಕರ ಬಂಧನ ಪ್ರಯತ್ನದಿಂದ ಉತ್ತಮ ಸಂದೇಶ ರಾಜ್ಯಕ್ಕೆ ಹೋಗುವುದಿಲ್ಲ ಎಂದು ಅವರು ನುಡಿದರು.
ದಕ್ಷಿಣ ಕನ್ನಡ ಮಾತ್ರವಲ್ಲದೆ ರಾಜ್ಯದಾದ್ಯಂತ ಪೊಲೀಸ್ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ಎಸಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಗೃಹ ಸಚಿವರು ಪೊಲೀಸ್ ವರಿಷ್ಠರ ಜೊತೆ ಮಾತನಾಡಬೇಕು ಎಂದು ಒತ್ತಾಯಿಸಿದರು. ಗುಲ್ಬರ್ಗದಲ್ಲಿ ನಮ್ಮ ಕಾರ್ಯಕರ್ತನ ಹತ್ಯೆ ಆಗಿದೆ. ಚುನಾವಣೆ ಸಂದರ್ಭದಲ್ಲಿ ಕೊಡಗಿನಲ್ಲಿ ನಮ್ಮ ಕಾರ್ಯಕರ್ತನ ಮೇಲೆ ಕಾರು ಹರಿಸಿ ಒಬ್ಬರು ಮರಣ ಹೊಂದಿದ್ದಾರೆ ಎಂದು ಗಮನ ಸೆಳೆದ ಅವರು, ರಾಜ್ಯ ಸರಕಾರ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರನ್ನು ಬಂಧಿಸಲು ಹಿಂದೆ ಮುಂದೆ ನೋಡುತ್ತದೆ ಎಂದು ಟೀಕಿಸಿದರು.
ನಾನು ಮೊನ್ನೆ ಹರೀಶ್ ಪೂಂಜ ಅವರ ಭಾಷಣದ ವಿಡಿಯೋ ಕೇಳಿದ್ದೇನೆ. ಈ ವಿಷಯದಲ್ಲಿ ಶಾಸಕರ ಜೊತೆ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇನೆ. ಪೊಲೀಸ್ ಅಧಿಕಾರಿಗಳು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ. ಅಕ್ರಮ ಕ್ವಾರಿ ಮಾಡುವವರ ವಿರುದ್ಧ ಎಫ್‍ಐಆರ್, ಕ್ರಮದ ವಿಚಾರದಲ್ಲಿ ನಮ್ಮದು, ಶಾಸಕರದ್ದಾಗಲೀ ತಕರಾರಿಲ್ಲ. ಎಫ್‍ಐಆರ್‍ನಲ್ಲಿ ನಮ್ಮ ಪಕ್ಷದ ಯುವಮುಖಂಡ ಶಶಿರಾಜ್ ಅವರ ಹೆಸರನ್ನು ಸೇರಿಸುವ ಪಿತೂರಿಯನ್ನು ಪೊಲೀಸ್ ಅಧಿಕಾರಿಗಳು ಮಾಡಿದ್ದಾಗಿ ಆಕ್ಷೇಪ ವ್ಯಕ್ತಪಡಿಸಿದರು.
ನಮ್ಮ ಶಾಸಕ ಹರೀಶ್ ಪೂಂಜ ಅವರು ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದಾಗ, ‘ಇಲ್ಲ ಯಾವುದೇ ಕಾರಣಕ್ಕೂ ಶಶಿರಾಜ್ ಅವರ ಹೆಸರಿಲ್ಲ ಎಂದು ಸುಳ್ಳು ಹೇಳಿದ್ದರು. ಅಕ್ರಮ ಕಲ್ಲು ಕ್ವಾರಿಯಲ್ಲಿ ಪಾತ್ರ ಇಲ್ಲದಿದ್ದರೂ ಸೇಡು ತೀರಿಸುವ ನಿಟ್ಟಿನಲ್ಲಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಹೆಸರು ಸೇರಿಸಿದ್ದಾರೆ. ಬಳಿಕ ರಾತ್ರೋರಾತ್ರಿ ಬಂಧಿಸಿದ್ದು, ಅದರ ವಿರುದ್ಧ ನಮ್ಮ ಶಾಸಕರು ಪೊಲೀಸ್ ಠಾಣೆಗೆ ಹೋಗಿ ಪ್ರಶ್ನೆ ಮಾಡಿದ್ದು ಸತ್ಯ’ ಎಂದು ವಿವರಿಸಿದರು.
ನಮ್ಮ ಕಾರ್ಯಕರ್ತರ ವಿರುದ್ಧ ಸೇಡಿನ ಎಫ್‍ಐಆರ್ ದಾಖಲಿಸಿ ದೌರ್ಜನ್ಯ ಮಾಡುವುದರ ವಿರುದ್ಧ ನಮ್ಮ ಶಾಸಕ ಠಾಣೆಗೆ ಹೋಗಿ ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಿದ್ದಾರೆ. ಬಳಿಕ ಹೋರಾಟಕ್ಕೂ ಕರೆ ಕೊಟ್ಟಿದ್ದು ಸತ್ಯ. ಪೊಲೀಸ್ ಅಧಿಕಾರಿಗಳು ಚುನಾವಣೆ ನೀತಿ ಸಂಹಿತೆಯ ನೆಪವೊಡ್ಡಿ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಇದು ಖಂಡನೀಯ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಬೇರೆ ಬೇರೆ ವಿಚಾರದಲ್ಲಿ ಹೋರಾಟ ಮಾಡಿದರೆ ಅವರಿಗೆ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಆದರೆ, ನಾವು ನಮ್ಮ ಕಾರ್ಯಕರ್ತರ ಮೇಲೆ ದುರುದ್ದೇಶದ ಕ್ರಮವನ್ನು ಪ್ರಶ್ನಿಸಿ ಪ್ರತಿಭಟನೆಗೆ ಮುಂದಾದರೆ ಅದನ್ನು ಹತ್ತಿಕ್ಕುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ನಮ್ಮ ಶಾಸಕರು ಸಹಜವಾಗಿ ಉದ್ವೇಗದಲ್ಲಿ ಕೆಲವು ಮಾತನಾಡಿದ್ದಾರೆ. ಅದು ಸರಿಯಲ್ಲ ಎಂದು ಅವರಿಗೂ ಅನಿಸಿದೆ ಎಂದು ಸ್ಪಷ್ಟಪಡಿಸಿದರು.
‘ಬೆಂಗಳೂರಿನ ಸೌಂದರ್ಯ’ಕ್ಕೆ ಹೆಚ್ಚು ಆದ್ಯತೆ ನೀಡಿ: ಸಿಟಿ ರೌಂಡ್ಸ್ ವೇಳೆ ‘ಸಿಎಂ ಸಿದ್ಧರಾಮಯ್ಯ’ ಸೂಚನೆ
BIG NEWS: ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಎಂದ ‘ರಾಹುಲ್ ಗಾಂಧಿ’ ವಿರುದ್ಧ ‘JDS’ ದೂರು