ನವದೆಹಲಿ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರು ಸದನದಲ್ಲಿ ಅವಾಚ್ಯವಾಗಿ ಹೇಳಿಕೆ ನೀಡಿದ್ದಾರೊ ಇಲ್ಲವೊ ಎಂಬುದರ ಸತ್ಯಶೋಧನೆ ಆಗಬೇಕು. ಸರ್ಕಾರ ಅವರಿಗೆ ಚಿತ್ರಹಿಂಸೆ ಕೊಟ್ಟು ಅಮಾನವೀಯವಾಗಿ ನಡೆಸಿಕೊಂಡಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ನಡವಳಿಕೆಯನ್ನು ನಾವು ಸಮರ್ಥಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಿಂದೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂದವರಿಗೆ ಈ ಸರ್ಕಾರ ಯಾವುದೇ ಶಿಕ್ಷೆ ವಿಧಿಸಲಿಲ್ಲ. ಸಿ.ಟಿ.ರವಿಯವರು ತಾವು ಆ ರೀತಿ ಹೇಳಿಕೆ ನೀಡಲಿಲ್ಲ ಎಂದು ಬಹಳ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ನಾವು ನ್ಯಾಯಸಮರ್ಥವಾಗಿ ಮಾತನಾಡುತ್ತಿದ್ದೇವೆ. ನಾವೇನೂ ತನಿಖೆ ಬೇಡ ಎಂದು ಹೇಳಿಲ್ಲವಲ್ಲ. ಸತ್ಯಶೋಧನೆ ಆಗದೇ ತನಿಖೆಯಾಗದೇ ಯಾವುದೇ ಅಂತಿಮ ನಿರ್ಧಾರಕ್ಜೆ ಬರುವುದು ತಪ್ಪು ಎಂದರು.
ಈ ಹಿಂದೆ ವಿಧಾನಸೌಧದಲ್ಲಿ ಈ ರೀತಿಯ ಪ್ರಕರಣಗಳು ನಡೆದಾಗ ಯಾರೂ ಪೊಲಿಸ್ ಸ್ಟೇಷನ್ ಗೆ ಹೋಗಿರಲಿಲ್ಲ. ವಿಧಾನ ಮಂಡಲದ ಸಮಿತಿ ಮಾಡಿ ಅದರ ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಹಂಗಿರುವಾಗ ಏಕಾಏಕಿ ಬಂಧಿಸಿ, ಪೊಲಿಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿ, ರಾತ್ರಿಯೆಲ್ಲ ಊರೆಲ್ಲ ಸುತ್ತಿಸುವುದು ಯಾವ ಕಾನೂನಿನಲ್ಲಿ ಬರೆದಿದೆ ಎಂದು ಪ್ರಶ್ನಿಸಿದರು.
ಆಡಳಿತ ಹಳಿ ತಪ್ಪಿದೆ
ಕರ್ನಾಟಕದಲ್ಲಿ ಆಡಳಿತ ಹಳಿ ತಪ್ಪಿದೆ. ಪೊಲೀಸ್ ರಾಜ್ಯ ನಡೆಯುತ್ತಿದೆ. ಪ್ರತಿಯೊಂದಕ್ಕೂ ಪೋಲಿಸ್ ದುರ್ಬಳಕೆ ಆಗುತ್ತಿದೆ. ವಿರೋಧ ಪಕ್ಷಗಳ ಮೇಲೆ ದ್ವೇಷ ಸಾಧಿಸಲು ಹಲವಾರು ಎಸ್ ಐಟಿ ರಚನೆ ಮಾಡಿ ಹಲವಾರು ತನಿಖೆ ಮಾಡುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಅವರ ವಿರುದ್ದವೇ ತನಿಖೆ ನಡೆಯುತ್ತಿದೆ.ಇಂತಹ ಸಂದರ್ಭದಲ್ಲಿ ಪೊಲೀಸ್ ವ್ಯವಸ್ಥೆ ದುರ್ಬಳಕೆ ವಿಧಾನಸೌಧದವರೆಗೂ ತಲುಪಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಮೊದಲು ರೈತ ಸಮುದಾಯವಾಗಿರುವ ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಚಾರ್ಜ್ ಮಾಡಿ ರಕ್ತ ಸುರಿಸಿದರು. ಹಲವಾರು ಬಾರಿ ರೈತರು, ಇದೇ ಪಂಚಮಸಾಲಿ ಸಮುದಾಯದವರು ಪ್ರತಿಭಟನೆ ಮಾಡಿದಾಗಲೂ ಈ ರೀತಿ ನಡೆದಿರಲಿಲ್ಲ. ಒಂದು ರೀತಿಯಲ್ಲಿ ಪೊಲೀಸರ ದಬ್ಬಾಳಿಕೆಯಿಂದಲೇ ಎಲ್ಲವನ್ನು ಮಾಡಬಲ್ಲೆ ಎಂಬ ಅಭಿಪ್ರಾಯ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಬಂದಂತಿದೆ. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯವರ ಬಂಧನ ಸದನದೊಳಗೆ ಆಗಿರುವ ಘಟನೆಯ ಬಗ್ಗೆ ಸಭಾಪತಿಯವರು ನಿರ್ಣಯ ಮಾಡಬೇಕು ಎಂದು ಹೇಳಿದರು.
ಕೇಡುಗಾಲ ದೂರವಿಲ್ಲ
ಈ ಪ್ರಕರಣದಲ್ಲಿ ಯಾವುದೇ ರೀತಿಯ ತನಿಖೆ ಮಾಡದೇ ದೂರು ಕೊಟ್ಟ ತಕ್ಷಣ ರವಿ ಅವರನ್ನು ಬಂಧನ ಮಾಡುವಂಥದ್ದು, ಅವರನ್ನು ನಡೆಸಿಕೊಂಡ ರೀತಿ ಸರಿಯಾಗಿಲ್ಲ, ಅವರನ್ನು ಬಂಧನ ಮಾಡಿರುವುದೇ ತಪ್ಪು ಇಂತ ಪ್ರಕರಣಗಳಲ್ಲಿ ಶೊಕಾಸ್ ನೊಟೀಸ್ ಕೊಟ್ಟು ಕರೆದು ವಿಚಾರಣೆ ಮಾಡಿ ಸಾಕ್ಷಿ ಆಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಬೇಕು. ಹಲವಾರು ಪ್ರಕರಣಗಳಲ್ಲಿ ಎಫ್ ಎಸ್ ಎಲ್ ಲ್ಯಾಬ್ ಗೆ ಕೊಟ್ಟು ವಿಡಿಯೊ, ಆಡಿಯೊಗಳನ್ನು ಪರಿಶೀಲಿಸುತ್ತಾರೆ. ಆದರೆ, ಈ ಪ್ರಕರಣದಲ್ಲಿ ಅದ್ಯಾವುದನ್ನೂ ಮಾಡದೇ ದೂರು ಕೊಟ್ಟ ಎರಡು ಗಂಟೆಯಲ್ಲಿ ಅವರನ್ನು ಬಂಧಿಸಿ ಖಾನಾಪುರ ಪೊಲಿಸ್ ಸ್ಟೇಷನ್ ಗೆ ಕೆರೆದುಕೊಂಡು ಹೋಗಿ ಅಲ್ಲಿಂದ ಹಲವಾರು ಕಡೆ ತಿರುಗಾಡಿಸಿ ಚಿತ್ರಹಿಂಸೆ ನೀಡಿ ಮಾನಸಿಕ ಹಿಂಸೆ ನೀಡಿ ಅವರನ್ನು ನಡೆಸಿಕೊಂಡ ರೀತಿ ಅಮಾನವೀಯವಾಗಿದೆ. ಎಲ್ಲದಕ್ಕೂ ಕಾನೂನಿದೆ. ವಿಧಾನವಿದೆ. ಅದ್ಯಾವುದನ್ನು ಇವರು ಪಾಲಿಸಿಲ್ಲ. ಪೊಲಿಸರೆ ಕಾನೂನು ಉಲ್ಲಂಘನೆ ಮಾಡಿ ತನಿಖೆ ಮಾಡಲು ಯಾವ ರಾಜಕೀಯ ಶಕ್ತಿ ಪ್ರೇರಣೆ ಇದೆ. ಮುಖ್ಯಮಂತ್ರಿಗಳು ಬಹಳ ವಿಚಾರ ಮಾಡಬೇಕಿದೆ. ಈ ರೀತಿಯ ದಮನಕಾರಿ ದಬ್ಬಾಳಿಕೆ ಜನ ಶಕ್ತಿಯ ಮುಂದೆ ಬಹಳ ದಿನ ನಡೆಯುವುದಿಲ್ಲ. ಇದೇ ರೀತಿ ಮುಂದುವರೆದರೆ ಸರ್ಕಾರಕ್ಕೆ ಕೇಡುಗಾಲ ದೂರವಿಲ್ಲ ಅನಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ ಹಾಜರಿದ್ದರು.
ಮಲೆನಾಡಲ್ಲಿ ‘ಹೊಸ ವರ್ಷ ಆಚರಣೆ’ ಆಸೆ ಇದೆಯೇ? ಇಲ್ಲಿದೆ ಸುವರ್ಣಾವಕಾಶ | Malnad Karnival New Year Celebration
ಓದಿ ಉತ್ತಮ ಸಾಧನೆ ಮಾಡಬೇಕಿದ್ದ ಬಾಲಕಿಗೆ ಅನಾರೋಗ್ಯ: ನಿಮ್ಮ ನೆರವು, ಸಹಕಾರಕ್ಕೆ ಮನವಿ