ಬೆಂಗಳೂರು : ಬೆಂಗಳೂರು ನಗರಕ್ಕೆ ಹೊಸ ರೂಪ ತರಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಹಲವು ತೀರ್ಮಾನಗಳನ್ನು ಬಿಬಿಎಂಪಿ ಸಭೆಯಲ್ಲಿ ಡಿಕೆ ಶಿವಕುಮಾರ್ ಕೈಗೊಂಡಿದ್ದಾರೆ. ಬಿಬಿಎಂಪಿಯ 2024-25ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಸದಸ್ಯರೊಂದಿಗೆ ಸೋಮವಾರ ವಿಕಾಸಸೌಧದಲ್ಲಿಸಭೆ ನಡೆಸಿ ಸಲಹೆ, ಸೂಚನೆಗಳನ್ನು ಪಡೆದರು.
ನಗರದ ಕೆಲ ಬಡಾವಣೆಗಳು ಯೋಜಿತವಾಗಿ ನಿರ್ಮಾಣಗೊಂಡಿದ್ದು, ಉಳಿದ ಪ್ರದೇಶಗಳು ಯೋಜಿತವಾಗಿ ಬೆಳೆದಿಲ್ಲ. ಹೀಗಾಗಿ, ಬೆಂಗಳೂರಿಗೆ ಹೊಸ ರೂಪ ನೀಡಲು ಸರ್ಕಾರ ಮುಂದಾಗಿದೆ. ನಗರದಲ್ಲಿ ಸಂಚಾರ ದಟ್ಟಣೆ, ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ ಸಮಸ್ಯೆಗಳಿವೆ. 2013 ರಿಂದ ಕುಡಿಯುವ ನೀರಿನ ದರ ಹೆಚ್ಚಳ ಮಾಡಿಲ್ಲ.
ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಸಮರ್ಪಕವಾಗಿ ತೆರಿಗೆ ಪಾವತಿಯಾಗುತ್ತಿಲ್ಲ. ಶೇ 50ರಷ್ಟು ಮಂದಿ ತಮ್ಮ ಆಸ್ತಿ ವಿಸ್ತೀರ್ಣಕ್ಕೆ ಅನುಗುಣವಾಗಿ ತೆರಿಗೆ ಪಾವತಿಸದಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿಆಸ್ತಿ ದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
2020ರಲ್ಲಿ ಬಿಬಿಎಂಪಿ ಕಾಯಿದೆಗೆ ತಿದ್ದುಪಡಿ ತಂದು ದಂಡದ ಪ್ರಮಾಣ ಹೆಚ್ಚಿಸಲಾಗಿದೆ. ಇದನ್ನು ಯಾರೊಬ್ಬರೂ ಗಮನಿಸಿಲ್ಲ. ಹೀಗಾಗಿ, ಕಾನೂನಿಗೆ ಮತ್ತೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಎಲ್ಲ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ಬಿಡಿಎ, ಬಿಬಿಎಂಪಿ, ಜಲಮಂಡಳಿ ಹಾಗೂ ಬೆಸ್ಕಾಂ ಒಟ್ಟಾಗಿ ಕೆಲಸ ಮಾಡಬೇಕಿದೆ,” ಎಂದರು.
ಸುಪ್ರೀಂಕೋರ್ಟ್ ಆದೇಶದಂತೆ 6 ಟಿಎಂಸಿ ನೀರನ್ನು ನಗರಕ್ಕೆ ಬಳಸಲು ಸರಕಾರಿ ಆದೇಶ ಹೊರಡಿಸಲಾಗಿದೆ. ಆ ಮೂಲಕ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗಿದೆ. ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್‌ಗಳನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಘಿಸಿದವರಿಗೆ ದಂಡ ಹಾಕಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ನನಗೂ ದಂಡ ಹಾಕಿದ್ದಾರೆ. ಯಾವುದೇ ಪಕ್ಷ, ನಾಯಕರು ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸಿದರೂ ಕಾನೂನುರೀತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಲ್ಲದಿದ್ದರೆ, ಫ್ಲೆಕ್ಸ್ ಹಾವಳಿ ನಿಯಂತ್ರಣ ಕಷ್ಟ,ಎಂದು ಹೇಳಿದರು.
ಸಭೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಜಮೀರ್ ಅಹ್ಮದ್, ಸಂಸದ ಡಿ.ಕೆ.ಸುರೇಶ್, ಶಾಸಕರಾದ ಎಸ್.ಟಿ.ಸೋಮಶೇಖರ್, ಎಂ.ಕೃಷ್ಣಪ್ಪ, ಎಸ್.ಸುರೇಶ್ ಕುಮಾರ್, ರವಿ ಸುಬ್ರಮಣ್ಯ, ಮುನಿರಾಜು, ಉದಯ್ ಗರುಡಾಚಾರ್, ಶಿವಣ್ಣ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಯು.ಬಿ.ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.