ಬೆಂಗಳೂರು : ಕಳೆದ ವರ್ಷ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭ್ರೂಣಹತ್ಯೆ ಪ್ರಕರಣ ಬಾರಿ ಸದ್ದು ಮಾಡಿತ್ತು. ಆದರೂ ಕೂಡ ಪೊಲೀಸ್ ಇಲಾಖೆ ಎಷ್ಟೇ ಕಠಿಣವಾದಂತ ಕ್ರಮ ಕೈಗೊಂಡರು ಸಹ ಇತ್ತೀಚಿಗೆ ಕೂಡ ಹಲವು ಭ್ರೂಣಹತ್ಯೆ ಪ್ರಕರಣಗಳು ನಡೆದಿದ್ದವು. ಭ್ರೂಣಹತ್ಯೆ ತಡೆಗೆ ಇದೀಗ ಆರೋಗ್ಯ ಇಲಾಖೆ ಹೊಸ ಪ್ಲಾನ್ ಮಾಡಿದ್ದು ತನ್ನ ವ್ಯಾಪ್ತಿಯಲ್ಲೇ ಪೊಲೀಸ್ ವಿಭಾಗ ತೆರೆಯಲು ಮುಂದಾಗಿದೆ.
ಈ ಕುರಿತಂತೆ ಆರೋಗ್ಯ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಅವರು, ಮಾತನಾಡಿದ್ದು, ಆರೋಗ್ಯ ಇಲಾಖೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತರ (ಎಸಿಪಿ) ಶ್ರೇಣಿ ಹುದ್ದೆ ಸೃಷ್ಟಿಸಿ ಅವರ ಮೂಲಕ ಪೊಲೀಸ್ ಇಲಾಖೆ ಜತೆಗೂಡಿ ಭ್ರೂಣಹತ್ಯೆ ತಡೆಯಲು ವ್ಯವಸ್ಥಿತ ಕಾರ್ಯತಂತ್ರ ರೂಪಿಸಲು ಉದ್ದೇಶಿಸಿರುವುದಾಗಿ ಸಚಿವರು ಘೋಷಿಸಿದರು.
ಬೆಂಗಳೂರಿನ ಬೈಯಪ್ಪನಹಳ್ಳಿ ಪ್ರಕರಣದ ಬಳಿಕ, ಮಂಡ್ಯ- ಪಾಂಡವಪುರ, ಮೈಸೂರು, ಬಾಗಲಕೋಟೆ, ಬೆಳಗಾವಿ ಸೇರಿ ವಿವಿಧ ಕಡೆ ಪ್ರಕರಣ ಬೆಳಕಿಗೆ ಬಂದಿವೆ. ನಮ್ಮ ಆಸ್ಪತ್ರೆಯೊಂದರ ಆವರಣದ ವಸತಿ ಗೃಹದಲ್ಲೇ ಭ್ರೂಣಹತ್ಯೆ ಮಾಡುತ್ತಿದ್ದುದು ಗಮನಕ್ಕೆ ಬಂದಿತ್ತು. ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಯಿತು. ಇವೆಲ್ಲ ಪ್ರಕರಣಗಳನ್ನು ಇಲಾಖೆ ಪತ್ತೆ ಹಚ್ಚಿದೆ, ಜನರೂ ಜಾಗೃತರಾಗಿದ್ದಾರೆ ಎಂದು ವಿವರಿಸಿದರು.
ಭ್ರೂಣಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎಲ್ಲಾ ಸ್ಕಸ್ಕ್‌ಯನಿಂಗ್ ಸೆಂಟರ್‌ಗಳ ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಲಾಗುತ್ತಿದೆ. ಭ್ರೂಣಹತ್ಯೆ ಪ್ರಕರಣಗಳ ಬಗ್ಗೆ ಮಾಹಿತಿ ಕಲೆಹಾಕಿ ಪತ್ತೆ ಮಾಡಬೇಕೆಂದು ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.