ನವದೆಹಲಿ: ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಆಂಥ್ರೊಪೊಲಾಜಿಕಲ್ ಸರ್ವೇ ಆಫ್ ಇಂಡಿಯಾ (ಎಎನ್ಎಸ್ಐ) ಮೂಲಕ ಈ ಅಧ್ಯಯನವನ್ನು ಕೈಗೊಳ್ಳಲಾಗುತ್ತಿದೆ.
ಪ್ರಾಚೀನ ಭಾರತೀಯ ಸಮುದಾಯಗಳ ಮೂಲದ ಬಗ್ಗೆ ವಿರೋಧಾಭಾಸ ಸಿದ್ಧಾಂತಗಳ ಮಧ್ಯೆ, ದಕ್ಷಿಣ ಏಷ್ಯಾದ ಜನಸಂಖ್ಯೆಯ ಇತಿಹಾಸವನ್ನು “ನಿರ್ಣಾಯಕವಾಗಿ” ಕಂಡುಹಿಡಿಯಲು ಪ್ರಾಚೀನ ಮತ್ತು ಆಧುನಿಕ ಜೀನೋಮಿಕ್ಸ್ ಅನ್ನು ಬಳಸಿಕೊಂಡು ಸಮಗ್ರ ವೈಜ್ಞಾನಿಕ ಅಧ್ಯಯನವನ್ನು ಸರ್ಕಾರ ಕೈಗೊಂಡಿದೆ.
“ಪ್ರಾಚೀನ ಮತ್ತು ಆಧುನಿಕ ಜೀನೋಮಿಕ್ಸ್ ಬಳಸಿ ದಕ್ಷಿಣ ಏಷ್ಯಾದ ಜನಸಂಖ್ಯೆಯ ಇತಿಹಾಸದ ಪುನರ್ನಿರ್ಮಾಣ” ಎಂಬ ಶೀರ್ಷಿಕೆಯ ಈ ಯೋಜನೆಯು ಭಾರತ ಮತ್ತು ಪಾಕಿಸ್ತಾನದ ವಿವಿಧ ಪುರಾತತ್ವ ಸ್ಥಳಗಳಿಂದ ಸಂಗ್ರಹಿಸಿದ 300 ಪ್ರಾಚೀನ ಅಸ್ಥಿಪಂಜರದ ಅವಶೇಷಗಳನ್ನು ಅಧ್ಯಯನ ಮಾಡುತ್ತದೆ.
ಇವುಗಳಲ್ಲಿ ಸಿಂಧೂ ಕಣಿವೆ ನಾಗರೀಕತೆಯ ತಾಣಗಳಾದ ಹರಪ್ಪ ಮತ್ತು ಮೊಹೆಂಜೊ-ದಾರೊ (ಈಗ ಪಾಕಿಸ್ತಾನದಲ್ಲಿದೆ), ಬುರ್ಜಾಹೋಮ್ (ಜಮ್ಮು ಮತ್ತು ಕಾಶ್ಮೀರ), ನಾಗಾರ್ಜುನಕೊಂಡ (ಆಂಧ್ರಪ್ರದೇಶ), ಮಸ್ಕಿ (ಕರ್ನಾಟಕ), ರೋಪರ್ (ಪಂಜಾಬ್) ಮತ್ತು ಲೋಥಾಲ್ (ಗುಜರಾತ್) ಗಳಲ್ಲಿ ಸ್ವಾತಂತ್ರ್ಯದ ಮೊದಲು ಮತ್ತು ನಂತರ ನಡೆಸಿದ ಉತ್ಖನನದ ಸಮಯದಲ್ಲಿ ಸಂಗ್ರಹಿಸಿದ ಅವಶೇಷಗಳು ಸೇರಿವೆ.
ಅಸ್ಥಿಪಂಜರದ ಅವಶೇಷಗಳನ್ನು 1922 ಮತ್ತು 1958 ರ ನಡುವೆ ಭಾರತೀಯ ಪುರಾತತ್ವ ಸಮೀಕ್ಷೆಯು ಉತ್ಖನನ ಮಾಡಿತು ಮತ್ತು ನಂತರ ಎಎನ್ಎಸ್ಐಗೆ ವಹಿಸಲಾಯಿತು.