ವಿಜಯಪುರ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯಗೆ ಪ್ರಾಸೀಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇದನ್ನ ಪ್ರಶ್ನಿಸಿ ಸಿದ್ದರಾಮಯ್ಯ ಕೂಡ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದರ ಮಧ್ಯ ಇಂದು ರಾಜ್ಯಪಾಲರು ರೀಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಿ ವರದಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದಕ್ಕೆ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ರಾಜ್ಯಪಾಲರು ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಇಂದು ಮಾಧ್ಯಮಗಳೊಂದಿಗೆ ರಾಜ್ಯಪಾಲರ ಹಸ್ತಕ್ಷೇಪ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವಿನ ಸಂಘರ್ಷವಲ್ಲ. ಆಡಳಿತದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡಬಾರದು. ಎಲ್ಲರೂ ಹೋಗಿ ರಾಜ್ಯಪಾಲರಿಗೆ ದೂರು ಕೊಡುವುದು, ಅವರು ಅದನ್ನು ಪರಿಗಣಿಸುವುದು ಆಗಬಾರದು ಎಂದರು.
ಇದೇ ವೇಳೆ ಶಾಸಕ ಮುನಿರತ್ನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸ್ವಾಭಾವಿಕವಾಗಿ ಯಾರೂ ಊಹಿಸದ ಆಪಾದನೆಗಳು ಅವರ ಮೇಲೆ ಬರುತ್ತಿವೆ. ಎಲ್ಲದರ ಕುರಿತು ತನಿಖೆಯಾಗಲಿ. ನಿಜವಾಗಿ ಆ ರೀತಿ ಘೋರವಾದಂತಹ ಕೃತ್ಯ ಮಾಡಿದ್ದರೇ ನಿರ್ದಾಕ್ಷಿಣ್ಯ ಕ್ರಮ ಆಗಲಿದೆ. ಮೊದಲ ಬಾರಿಗೆ ಊಹಿಸದಂತಹ ಆಪಾದನೆ ಕೇಳಿ ನಾನು ಗಾಬರಿಯಾದೆ. ಹನಿಟ್ರ‍್ಯಾಪ್, ಸಿಡಿ ಮಾಡೋದು, ಹೆಣ್ಣುಮಕ್ಕಳ ಬಳಕೆ ಇವೆಲ್ಲ ಹೇಯ ಕೃತ್ಯಗಳು ಎಂದಿದ್ದಾರೆ.
ತಿರುಪತಿ ಲಡ್ಡುವಿನಲ್ಲಿ ಪಾವಿತ್ರ್ಯತೆ ಇದೆ
ತಿರುಪತಿ ಲಡ್ಡು ವಿಚಾರ ಜನರ ಧಾರ್ಮಿಕ ಭಾವನೆಗೆ ಸಂಬಂಧಪಟ್ಟಿರುವುದು. ಲಡ್ಡಿಗೆ ದನದ ಕೊಬ್ಬು ಬೆರೆಸುವುದು ಘೋರ ಅಪರಾಧ. ದನದ ಕೊಬ್ಬನ್ನು ಬೆರೆಸಿದ್ದರೇ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು. ಭಕ್ತರ ಭಾವನೆಗಳೊಂದಿಗೆ ಆಟ ಆಡುವುದು ಸರಿಯಲ್ಲ.ಅದರಲ್ಲಿ ಪಾವಿತ್ರ‍್ಯತೆ ಇದೆ, ದನದ ಕೊಬ್ಬು ಬೆರೆಸುವುದು ಘೋರ ಅಪರಾಧ. ಆಗಾಗ ಪ್ರಸಾದದ ತಪಾಸಣೆ ಮಾಡಬೇಕಿತ್ತು ಎಂದರು.