ಸೊರಬ: ರಾಜ್ಯದಲ್ಲಿ ಶೈಕ್ಷಣಿಕ ವ್ಯವಸ್ಥೆಯು ನಿರೀಕ್ಷಿತ ಪ್ರಗತಿ ಸಾಧಿಸಲು ತಮ್ಮದೇ ಆದ ಶ್ರಮ ವ್ಯಯಿಸುತ್ತಿರುವ ಅಡುಗೆ ಸಿಬ್ಬಂದಿಗಳ ಸೇವೆಯನ್ನು ಸರ್ಕಾರ ಅಗ್ರಗಣ್ಯವಾಗಿ ಗುರುತಿಸಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.
ಭಾನುವಾರ ಪಟ್ಟಣದಲ್ಲಿ 5.47 ರೂಪಾಯಿ ವೆಚ್ಚದ ವಿದ್ಯಾರ್ಥಿ ನಿಲಯ ಕಾಮಗಾರಿಗೆ ಭೂಮಿ ಪೂಜೆ, ತಾಲ್ಲೂಕಿನ ಚಿತ್ರಟ್ಟೆಹಳ್ಳಿ ವೃತ್ತದಲ್ಲಿ ಬಸ್ ನಿಲ್ದಾಣ, ಮೀನುಗಾರರಿಗೆ ತೆಪ್ಪ ವಿತರಣೆ, ಆನವಟ್ಟಿಯಲ್ಲಿ ಇಂದಿರಾ ಕ್ಯಾಂಟೀನ್ ಹಾಗೂ ಅಕ್ಷರ ದಾಸೋಹ ನಿವೃತ್ತ ಅಡುಗೆ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಇಡಿಗಂಟು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಪ್ರತಿದಿನವೂ ಬಿಸಿಯೂಟದಿಂದ ಮಕ್ಕಳ ದೈಹಿಕ, ಮಾನಸಿಕ ಸ್ಥಿತಿ ಉತ್ತಮವಾಗಿರುವಲ್ಲಿ ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳನ್ನು ಸರ್ಕಾರ ಗೌರವದಿಂದ ಸ್ಮರಿಸುತ್ತಿದೆ. ಶಾಲೆಯಲ್ಲಿ ಕಲಿಕೆಯ ವಾತಾವರಣ ಮೂಡಲು ಅಡುಗೆ ಸಹಾಯಕಿಯರ ಪಾತ್ರವೂ ಮುಖ್ಯವಾಗಿದೆ ಎಂದು ತಿಳಿಸಿದರು.
ಅಡುಗೆ ಸಿಬ್ಬಂದಿಗಳಿಗೆ ಇದುವರೆಗೂ ಇಡಿಗಂಟು ಇರಲಿಲ್ಲ.ಈಗ 40ಸಾವಿರ ಇಡಿಗಂಟು ವಿತರಣೆ ಮಾಡಲಾಗುತ್ತಿದೆ. ಸಿಬ್ಬಂದಿಗಳು 75ಸಾವಿರ ಇಡಿಗಂಟು ನೀಡಲು ಮನವಿ ಮಾಡಲಾಗಿದ್ದರು.ಮುಂದಿನ ದಿನಗಳಲ್ಲಿ ಗೌರವ ಧನ ಹೆಚ್ಚಳದೊಂದಿಗೆ ಇಡಿಗಂಟು75 ಸಾವಿರಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಅಕ್ಷರ ದಾಸೋಹ ಕಾರ್ಯಕ್ರಮ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಯೋಜನೆ ಆಗಿದ್ದರೂ ಕೂಡ ಅಡುಗೆ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರ ಕೇವಲ 600 ರೂಪಾಯಿ ಮಾತ್ರ ನೀಡುತ್ತಿದೆ. ರಾಜ್ಯ ಸರ್ಕಾರ 4200 ರೂಪಾಯಿ ನೀಡುವ ಮೂಲಕ ಅವರ ಘನತೆಯ ಬದುಕಿಗೆ ಅವಕಾಶ ನೀಡಿದೆ ಎಂದರು.
ಸಚಿವರು ಮಾತನಾಡುತ್ತಿದ್ದ ವೇಳೆಯಲ್ಲಿ ಕೆರೆಹಳ್ಳಿ ಗ್ರಾಮದ ತಾರಮ್ಮ ಅವರು ಸಚಿವರ ಬಳಿ ಬಂದು ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಲು ಮನವಿ ಮಾಡಿದರು. ಕೂಡಲೇ ಅವರ ಮನವಿಗೆ ಸ್ಪಂದಿಸಿದ ಸಚಿವರು, ನಿಮ್ಮ ಮಗ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದೀರಾ ಎಂದು ಪ್ರಶ್ನಿಸಿ,ಅತಿಥಿ ಶಿಕ್ಷಕರಿಗೂ ಗೌರವ ಧನ ಹೆಚ್ಚಳ ಮಾಡಲಾಗಿದೆ. ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಶೀಘ್ರದಲ್ಲೇ 15000 ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಲಾಗುವುದು. ಅರ್ಜಿ ಸಲ್ಲಿಸಿ ಸಿಇಟಿ ಮೂಲಕ ನಿಮ್ಮ ಮಗ ಆಯ್ಕೆ ಆಗಲಿ ಎಂದು ಶುಭ ಹಾರೈಸಿದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ.ಶ್ರೀಕಾಂತ್, ಶಿಕ್ಷಕ ಮಂಜುನಾಥಗೌಡ ಕೋರಿ ನಿರೂಪಿಸಿದರು.
ತಹಶೀಲ್ದಾರ್ ಪುರುಂದರ, ಇಒ ಶಶಿಧರ್, ಬಿಇಒ ಪುಷ್ಪಾ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜೈಶೀಲಗೌಡ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಮುಖಂಡರಾದ ಗಣಪತಿ ಹುಲ್ತಿಕೊಪ್ಪ, ಅಣ್ಣಪ್ಪ, ಸದಾನಂದಗೌಡ, ಪ್ರಕಾಶ್ ಮಡ್ಲೂರು, ಶಶಿಕಲಾ, ಮಂಜುನಾಥ್ ಓಟೂರು, ಗಣಪತಿ, ಬಸವೇಶ್ವರ,ಯಶೋಧಾ ಸೇರಿದಂತೆ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ವರದಿ: ರಾಘವೇಂದ್ರ ಟಿ ಜಂಗಿನಕೊಪ್ಪ, ಸೊರಬ, ಮೊಬೈಲ್: 9481494834








