ಬೆಂಗಳೂರು : 2025-26ನೇ ಸಾಲಿನಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿಯ ತಲಾ ವಾರ್ಷಿಕ ವೆಚ್ಚವನ್ನು ಮರು ನಿಗದಿಪಡಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ (ಆರ್.ಟಿ.ಇ)2009ರ ಸೆಕ್ಷನ್ 12(1)(ಸಿ)ಯ ಅನುಸಾರ ಎಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳು (ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ) 1ನೇ ತರಗತಿಯ ಶೇ:25ರಷ್ಟು ಸಾಮರ್ಥ್ಯವನ್ನು ಆ ಶಾಲೆಯ ನೆರೆಹೊರೆಯ ಪ್ರದೇಶದ ದುರ್ಬಲ ಮತ್ತು ಅಶಕ್ತ ವರ್ಗಗಳಿಗೆ ಸೇರಿದ ಮಕ್ಕಳಿಗೆ ಪ್ರವೇಶ ನೀಡಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು 8ನೇ ತರಗತಿಯವರೆಗೆ ನೀಡಬೇಕಿರುತ್ತದೆ. ಶಾಲೆಯು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ನೀಡುತ್ತಿದ್ದರೆ, ಮೇಲಿನ ಅಗತ್ಯತೆಯು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಅನ್ವಯಿಸುತ್ತದೆ.
ಕಾಯ್ದೆಯ ಸೆಕ್ಷನ್ 12(2)ರ ಅನುಸಾರ ಸರ್ಕಾರವು ಅಂತಹ ಶಾಲೆಗಳಿಗೆ ಸರ್ಕಾರಿ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಗೆ ಮಾಡುತ್ತಿರುವ ವೆಚ್ಚಕ್ಕೆ ಸೀಮಿತಗೊಳಿಸಿ, ಆಯಾ ಖಾಸಗಿ ಶಾಲೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೆ ಮಾಡಿರುವ ವೆಚ್ಚ ಅಥವಾ ಆ ಶಾಲೆಯು ಪ್ರತಿ ವಿದ್ಯಾರ್ಥಿಗೆ ವಿಧಿಸುತ್ತಿರುವ ಶುಲ್ಕ ಈ ಎರಡರಲ್ಲಿ ಯಾವುದು ಕಡಿಮೆಯೋ ಅದನ್ನು ಮರುಪಾವತಿಸಬೇಕಿರುತ್ತದೆ. ಕರ್ನಾಟಕ ಶಿಕ್ಷಣ ಹಕ್ಕು ನಿಯಮಗಳ ಪ್ರಕಾರ ಸರ್ಕಾರವು ಶೈಕ್ಷಣಿಕ ಸಾಲಿನ ಪ್ರಾರಂಭಕ್ಕೂ ಮುನ್ನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ತಲಾ ವೆಚ್ಚವನ್ನು ಅಧಿಸೂಚಿಸಬೇಕಿರುತ್ತದೆ.
ಮೇಲೆ ಓದಲಾದ (1)ರಲ್ಲಿನ ದಿನಾಂಕ:08.05.2012ರ ಸರ್ಕಾರದ ಆದೇಶದಲ್ಲಿ, ಸರ್ಕಾರಿ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಗೆ ಮಾಡುತ್ತಿರುವ ವೆಚ್ಚವನ್ನು ತರಗತಿ 1 ಮತ್ತು ನಂತರದ ತರಗತಿಗಳಿಗೆ ರೂ.11848/- ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ.5924/- ಎಂದು ಅಧಿಸೂಚಿಸಲಾಗಿದೆ.
ಮೇಲೆ ಓದಲಾದ (2)ರಲ್ಲಿನ ಸರ್ಕಾರದ ಆದೇಶಗಳಲ್ಲಿ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 12(2) ಮತ್ತು ನಿಯಮ 8(1)ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರತಿ ಮಗುವಿನ ತಲಾ ವಾರ್ಷಿಕ ವೆಚ್ಚವನ್ನು 2017-18, 2018-19 ಮತ್ತು 2019-20ನೇ ಶೈಕ್ಷಣಿಕ ಸಾಲಿಗೆ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಇಪಿ 108 ಎಂ.ಹೆಚ್.ಟಿ 2020, ದಿನಾಂಕ:05.09.2020, ಸರ್ಕಾರದ ಆದೇಶ ಸಂಖ್ಯೆ: ಇಪಿ 50 ಎಂ.ಹೆಚ್.ಟಿ 2021, ದಿನಾಂಕ: 29.10.2021 ರಂತೆ 2020-21 ಮತ್ತು 2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಪ್ರಾಥಮಿಕ ತರಗತಿಗಳಿಗೆ ರೂ.16,000/- ಎಂದು ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ.8000/- ಎಂದು ಪರಿಷ್ಕರಿಸಿ ಆದೇಶಿಸಲಾಗಿದೆ.
ಮೇಲೆ ಓದಲಾದ (3) ರಲ್ಲಿನ ಸರ್ಕಾರದ ಆದೇಶದಲ್ಲಿ, 2022-23ನೇ ಹಾಗೂ 2023-24ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಪ್ರಾಥಮಿಕ ತರಗತಿಗಳಿಗೆ ರೂ. 16,000/- ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ. 8000/- ಎಂದು ಆದೇಶಿಸಲಾಗಿದೆ.
ಮೇಲೆ ಓದಲಾದ (4) ರಲ್ಲಿನ ಸರ್ಕಾರದ ಆದೇಶದಲ್ಲಿ, 2024-25ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಪ್ರಾಥಮಿಕ ತರಗತಿಗಳಿಗೆ ರೂ. 16,000/- ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ. 8000/- ಎಂದು ಆದೇಶಿಸಲಾಗಿದೆ.
ಮೇಲೆ ಓದಲಾದ (5)ರಲ್ಲಿನ ಪುಸ್ತಾವನೆಯಲ್ಲಿ, ಆರ್.ಟಿ.ಇ ಅಡಿ ಪ್ರವೇಶ ಪಡೆದು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಸಲು, ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು 2012ರ ನಿಯಮ 8 ರಂತೆ ಪ್ರತಿ ವರ್ಷ ಸರ್ಕಾರದ ಹಂತದಲ್ಲಿ ಪ್ರತಿ ಮಗುವಿನ ತಲಾ ವೆಚ್ಚ ಘೋಷಣೆ ಆಗಬೇಕಿರುವುದಾಗಿ ತಿಳಿಸಿ, ಆರ್.ಟಿ.ಇ. ಅಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ 2025-26ನೇ ಸಾಲಿನ ಶುಲ್ಕ ಮರುಪಾವತಿಯನ್ನು ಸಂಬಂಧಿಸಿದ ಖಾಸಗಿ ಅನುದಾನರಹಿತ ಪ್ರಾಥಮಿಕ ಶಾಲೆಗಳಿಗೆ ಸಂದಾಯಿಸಲು ಪ್ರತಿ ಮಗುವಿನ ತಲಾ ವಾರ್ಷಿಕ ವೆಚ್ಚ ಘೋಷಿಸುವಂತೆ ಸಹ ಪತ್ರದಲ್ಲಿ ಕೋರಿರುತ್ತಾರೆ.
ಮೇಲ್ಕಂಡ ಪ್ರಸ್ತಾವನೆಯ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಆರ್.ಟಿ.ಇ ಅಡಿ ಪ್ರವೇಶ ಪಡೆದು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಸಲು, ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 12(2) ಮತ್ತು ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು 2012ರ ನಿಯಮ.
8(1)ರಂತೆ ಸರ್ಕಾರದ ಶಾಲೆಗಳಲ್ಲಿ ಪ್ರವೇಶ ಪಡೆದ ಪ್ರತಿ ಮಗುವಿನ ತಲಾ ವಾರ್ಷಿಕ ವೆಚ್ಚದನ್ವಯ 2025-26ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಪ್ರತಿ ಮಗುವಿನ ತಲಾ ವಾರ್ಷಿಕ ವೆಚ್ಚವನ್ನು ಪ್ರಾಥಮಿಕ ತರಗತಿಗಳಿಗೆ ರೂ.16,000/- ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ.8,000/-ಎಂದು ನಿಗದಿಪಡಿಸಿ ಆದೇಶಿಸಿದೆ.