ಬೆಂಗಳೂರು: ರಾಜ್ಯ ಸರ್ಕಾರವು ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕ ನೆಮ್ಮದಿ ನೀಡುವ ದೃಷ್ಟಿಯಿಂದ ತುಟ್ಟಿಭತ್ಯೆಯನ್ನು ಪರಿಷ್ಕರಿಸಿದೆ. 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ನೌಕರರಿಗೆ ಈ ಸೌಲಭ್ಯ ದೊರೆಯಲಿದೆ.
ತುಟ್ಟಿಭತ್ಯೆ ದರಗಳ ಪರಿಷ್ಕರಣೆ
ಸರ್ಕಾರದ ಹೊಸ ಆದೇಶದನ್ವಯ, ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 14.25 ರಿಂದ ಶೇಕಡ 15.75 ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಒಟ್ಟಾರೆಯಾಗಿ ಶೇ 1.50 ರಷ್ಟು ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕೃತ ದರಗಳು ಜನವರಿ 1, 2026 ರಿಂದ ಜಾರಿಗೆ ಬರಲಿವೆ.
ನಿವೃತ್ತಿ ವೇತನದಾರರಿಗೂ ಸಿಹಿ ಸುದ್ದಿ
ಸರ್ಕಾರಿ ನೌಕರರ ಜೊತೆಗೆ ನಿವೃತ್ತ ವೇತನದಾರರಿಗೂ ಈ ಆದೇಶ ಅನ್ವಯವಾಗಲಿದೆ:
-
ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರು.
-
ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ನೌಕರರು.
-
ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ನೌಕರರು. ಇವರೆಲ್ಲರಿಗೂ ಜನವರಿ 1, 2026 ರಿಂದ ಅನ್ವಯವಾಗುವಂತೆ ಮೂಲ ಪಿಂಚಣಿಯ ಮೇಲೆ ಶೇ 15.75 ರ ದರದಲ್ಲಿ ತುಟ್ಟಿಭತ್ಯೆ ಪಾವತಿಸಲಾಗುವುದು.
ಆದೇಶದ ಪ್ರಮುಖ ಮುಖ್ಯಾಂಶಗಳು
-
ಅನ್ವಯಿಸುವಿಕೆ: ಈ ಆದೇಶವು ಜಿಲ್ಲಾ ಪಂಚಾಯತ್ ಪೂರ್ಣಾವಧಿ ನೌಕರರು, ಕಾಲಿಕ ವೇತನ ಶ್ರೇಣಿಯಲ್ಲಿರುವ ವರ್ಕ್‌ಚಾರ್ಜ್ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಪೂರ್ಣಾವಧಿ ನೌಕರರಿಗೂ ಅನ್ವಯಿಸುತ್ತದೆ.
-
ಬಾಕಿ ಮೊತ್ತ ಪಾವತಿ: ಈ ಆದೇಶದನ್ವಯ ಲಭ್ಯವಾಗುವ ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು (Arrears), 2026ರ ಮೇ ತಿಂಗಳ ವೇತನ ಅಥವಾ ಪಿಂಚಣಿ ಬಟವಾಡೆಗೂ ಮೊದಲು ಪಾವತಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
-
ನಗದು ಪಾವತಿ: ಮುಂದಿನ ಆದೇಶದವರೆಗೆ ಪರಿಷ್ಕೃತ ತುಟ್ಟಿಭತ್ಯೆಯನ್ನು ನಗದಾಗಿ ಪಾವತಿಸಲಾಗುವುದು.
-
ಗಣನೆ: ತುಟ್ಟಿಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ಮಾತ್ರ ತೋರಿಸಬೇಕು ಮತ್ತು ಇದನ್ನು ಯಾವುದೇ ಉದ್ದೇಶಕ್ಕೆ ‘ವೇತನ’ ಎಂದು ಪರಿಗಣಿಸಲಾಗುವುದಿಲ್ಲ.
ಮೂಲ ವೇತನದ ವ್ಯಾಖ್ಯಾನ
ತುಟ್ಟಿಭತ್ಯೆಯ ಉದ್ದೇಶಕ್ಕಾಗಿ ‘ಮೂಲ ವೇತನ’ ಎಂದರೆ ನೌಕರರು ಪಡೆಯುತ್ತಿರುವ ವೇತನದ ಜೊತೆಗೆ, 2024ರ ಪರಿಷ್ಕೃತ ವೇತನ ಶ್ರೇಣಿಗಳ ಅಡಿಯಲ್ಲಿ ಮಂಜೂರು ಮಾಡಲಾದ ಸ್ಥಗಿತ ವೇತನ ಬಡ್ತಿ ಮತ್ತು ವೈಯಕ್ತಿಕ ವೇತನಗಳನ್ನು ಮಾತ್ರ ಒಳಗೊಂಡಿರುತ್ತದೆ. ಇದನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ಧಗಳನ್ನು ಸೇರಿಸುವಂತಿಲ್ಲ.
ಈ ಮಹತ್ವದ ತೀರ್ಮಾನವು ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಬೆಲೆ ಏರಿಕೆಯ ದಿನಗಳಲ್ಲಿ ಆಸರೆಯಾಗಲಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…









