ಬೆಂಗಳೂರು: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಶಿವಮೊಗ್ಗ ಜಿಲ್ಲೆಯ ಏಳು ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳಿಂದ ಆಯ್ಕೆಯಾಗಬೇಕಾದ ಚುನಾಯಿತ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಕುರಿತು ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಆಯೋಗವು ಅವಕಾಶ ನೀಡಿದೆ.
ಪ್ರಕಟಣೆಯ ಮುಖ್ಯಾಂಶಗಳು:
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5 ಮತ್ತು 308(ಎಫ್) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶಿವಮೊಗ್ಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಸದಸ್ಯರ ಸಂಖ್ಯೆಯನ್ನು ಆಯೋಗವು ನಿಗದಿಪಡಿಸಿದೆ.
ಆಕ್ಷೇಪಣೆ ಸಲ್ಲಿಸಲು ಮಾಹಿತಿ:
ನಿಗದಿಪಡಿಸಲಾದ ಸದಸ್ಯರ ಸಂಖ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಅಥವಾ ಆಸಕ್ತರು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
-
ಕೊನೆಯ ದಿನಾಂಕ: 24-04-2026, ಸಂಜೆ 5:00 ಗಂಟೆಯೊಳಗೆ.
-
ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ ಅಥವಾ ಖುದ್ದಾಗಿ/ಅಂಚೆ ಮೂಲಕ ಸಲ್ಲಿಸಬಹುದು.
(ಅ) ಆನ್‌ಲೈನ್ ಮೂಲಕ:
ಅಧಿಕೃತ ವೆಬ್‌ಸೈಟ್: https://rdpr.karnataka.gov.in/rdc/public/ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ‘ಸಾರ್ವಜನಿಕ ಸಲಹೆಗಳು’ ಎಂಬ ಲಿಂಕ್ ಕ್ಲಿಕ್ ಮಾಡಿ ಆಕ್ಷೇಪಣೆಗಳನ್ನು ದಾಖಲಿಸಬಹುದು.
(ಆ) ಅಂಚೆ ಅಥವಾ ಖುದ್ದಾಗಿ ಸಲ್ಲಿಸುವ ವಿಳಾಸ:
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 2ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ: 222/A, ಬಹುಮಹಡಿಗಳ ಕಟ್ಟಡ, ಅಂಬೇಡ್ಕರ್ ವೀಧಿ, ಬೆಂಗಳೂರು-560001.
ಆಕ್ಷೇಪಣೆಗಳ ಪರಿಶೀಲನಾ ಅದಾಲತ್:
ಸಲ್ಲಿಸಲಾದ ಆಕ್ಷೇಪಣೆಗಳ ಕುರಿತು ಪರಿಶೀಲನೆ ನಡೆಸಲು ಆಯೋಗವು ‘ಅದಾಲತ್’ ಅನ್ನು ಆಯೋಜಿಸಿದೆ.
-
ದಿನಾಂಕ: 27-04-2026
-
ಸಮಯ: ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:30 ರವರೆಗೆ.
-
ಸ್ಥಳ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗೇಟ್-3, 2ನೇ ಮಹಡಿ, ಕೊಠಡಿ ಸಂಖ್ಯೆ: 229, 230, ಬಹುಮಹಡಿಗಳ ಕಟ್ಟಡ, ಬೆಂಗಳೂರು-560001.
ಅದಾಲತ್‌ನಲ್ಲಿ ಭಾಗವಹಿಸಲು ಇಚ್ಛಿಸುವವರು ಸರ್ಕಾರದಿಂದ ನೀಡಲಾದ ಭಾವಚಿತ್ರವಿರುವ ಮೂಲ ಗುರುತಿನ ಚೀಟಿಯನ್ನು (Original ID Card) ಕಡ್ಡಾಯವಾಗಿ ತರತಕ್ಕದ್ದು. ನಿಗದಿತ ಸಮಯದ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಆಯೋಗದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..









