ಶಿವಮೊಗ್ಗ: ಸಾಗರದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದಿಂದನ ನಿರ್ಮಿಸುವಂತ ಶಾಲೆ, ಸಭಾ ಭವನಕ್ಕೆ ಸಮಿತಿಯಿಂದ ಎಷ್ಟು ಆಗುತ್ತೋ ಅಷ್ಟು ಹಣದ ನೆರವಾಗಿ. ಇನ್ನುಳಿದ ಹಣವನ್ನು ಸರ್ಕಾರದಿಂದ ತಂದು ಶಾಲೆ, ಸಭಾ ಭವನವನ್ನು ಪೂರ್ಣಗೊಳಿಸುವ ಜವಾಬ್ದಾರಿ ನನ್ನದು ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಭರವಸೆ ನೀಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ನೂತನ ಶಾಲೆ, ಸಭಾಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದಂತ ಅವರು, ಫೆಬ್ರವರಿ 3ರಿಂದ 9 ದಿನಗಳ ವರೆಗೆ ಸಾಗರದ ಪ್ರಸಿದ್ಧ ಮಾರಿಕಾಂಬ ದೇವಿ ಜಾತ್ರೆ ನೆರವೇರಲಿದೆ. ಈ ಬಾರಿ ಕಳೆದ ಬಾರಿಗಿಂದ 20 ರಿಂದ 30 ಲಕ್ಷ ಜನರು ಬರುವ ನಿರೀಕ್ಷೆಯಿದೆ ಎಂದರು.

ಮಾರಿಕಾಂಬ ಜಾತ್ರೆಗೆ ಆಗಮಿಸುವಂತ ಭಕ್ತರಿಗೆ ಯಾವುದೇ ಮೂಲಭೂತ ಸೌಕರ್ಯಗಳ ಕೊರತೆ ಆಗದಂತೆ ತಾಲ್ಲೂಕು ಆಡಳಿತದಿಂದ ಸಕಲ ಸಿದ್ಧತೆ ಮಾಡಲಾಗಿದೆ. ಜಾತ್ರೆಗಾಗಿ 20 ಸಮಿತಿಯನ್ನು ರಚನೆ ಮಾಡಲಾಗಿದ್ದು, ಒಂದೊಂದು ಕಮಿಟಿಗೂ ಓರ್ವ ಸರ್ಕಾರಿ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಜಾತ್ರೆಗೆ ಬರುವಂತ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿಸಿದರು.
ಮಾರಿಕಾಂಬ ದೇವಸ್ಥಾನದ ಸಮಿತಿಯಿಂದ ಜಾಗ ಖರೀದಿ ಮಾಡಿದ್ದರು. ಅದರಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಶಾಲೆ, ಸಭಾಭವನ ನಿರ್ಮಾಣ ಮಾಡುವ ಇಚ್ಛೆಯನ್ನು ಕಮಿಟಿಯವರು ನನ್ನ ಗಮನಕ್ಕೆ ತಂದರು. ಆಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವಂತ ತಾನು ಮುಂದೆ ನಿಂತು ಹಸಿರು ವಲಯದಲ್ಲಿದ್ದಂತ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಲು ಅನುಮತಿಸಲಾಗಿದೆ. ಆ ಮೂಲಕ ಬಡ ವರ್ಗ ಜನರ ಮಕ್ಕಳ ವಿದ್ಯಾಭ್ಯಾಸಕ್ಕೆ, ಮದುವೆಗೆ ನೆರವಾಗುವ ಕೆಲಸ ಮಾಡಲಾಗಿದೆ ಎಂದರು.

ಮಾರಿ ದೇವಾಲಯದಿಂದ ನಿರ್ಮಾಣ ಮಾಡುತ್ತಿರುವಂತ ಶಾಲೆ, ಸಭಾಭವನಕ್ಕೆ ಎಷ್ಟು ಸಾಧ್ಯವೋ ಅಷ್ಟು ನೆರವನ್ನು ಕಮಿಟಿಯವರು ಆಗಲಿ. ಜೊತೆ ಜೊತೆಗೆ ಎಲ್ಲಾ ಸಮುದಾಯದವರು ಶಾಲೆ, ಸಮುದಾಯ ಭವನ ನಿರ್ಮಾಣಕ್ಕೆ ಸಹಕರಿಸಿ. ನಾನು ಸರ್ಕಾರದಿಂದ ಶಾಲೆ, ಸಭಾ ಭವನ ನಿರ್ಮಾಣಕ್ಕೆ ಬೇಕಿರುವಂತ ಅನುದಾನ ಕೊಡಿಸುವುದಾಗಿ ಕಾರ್ಯಕ್ರಮದಲ್ಲೇ ಶಾಸಕ ಗೋಪಾಲಕೃಷ್ಣ ಬೇಳೂರು ಘೋಷಿಸಿದರು.
ಜಾತ್ರೆಯ ಪ್ರಯುಕ್ತ ಪ್ರಮುಖ ರಸ್ತೆಗಳನ್ನು ಡಾಂಬಾರೀಕರಣ ಮಾಡಲಾಗುತ್ತಿದೆ. ಸರ್ಕಾರಿ ಕಚೇರಿ, ಶಾಲಾ ಕಟ್ಟಡಗಳನ್ನು ಬಣ್ಣ ಬಳಿದು ಅಲಂಕರಿಸಲಾಗುತ್ತಿದೆ. ವಿದ್ಯುತ್ ದೀಪಾಲಂಕಾರ ಮಾಡಿ ಜಗಮಗಿಸುವಂತೆಯೂ ಸೂಚಿಸಲಾಗಿದೆ ಎಂದರು.
ಗಣಪತಿ ದೇವಸ್ಥಾನದ ಬಳಿಯಲ್ಲಿ ಪಾರ್ಕ್ ನಿರ್ಮಿಸಲಾಗುತ್ತಿದೆ. ದೇವಸ್ಥಾನಕ್ಕೆ ಬಂದಂತ ಭಕ್ತರು ಕೆಲವೊತ್ತು ಕುಳಿತು ಹೋಗುವಂತೆ ಮಾಡಲಾಗುತ್ತದೆ. ಸಾಗರದ 31 ವಾರ್ಡ್ ಗಳಲ್ಲೂ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ. 2008ರಲ್ಲೇ ನಾನು ಶಾಸಕನಾಗಿದ್ದಂತ ಸಂದರ್ಭದಲ್ಲಿ ಕೆಲ ವಾರ್ಡ್ ಗಳಲ್ಲಿ ಪಾರ್ಕ್ ನಿರ್ಮಿಸಲಾಗಿತ್ತು. ಈಗ ಹಾಳಾಗಿದ್ದು, ಅವುಗಳನ್ನು ಸುಂದರವಾಗಿ ಮಾಡುವಲ್ಲಿ ನಗರಸಭೆಗೆ ತಿಳಿಸಲಾಗಿದೆ ಎಂದರು.

8 ಎಕರೆಯಲ್ಲಿ ಮಾರಿಗುಡಿಯಿಂದ ಶಾಲೆ, ಸಭಾಭವನ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ನೂತನ ಶಾಲೆ, ಸಭಾ ಭವನ ನಿರ್ಮಾಣ ಕಾಮಗಾರಿಯೂ ಶೀಘ್ರವೇ ಆರಂಭಗೊಳ್ಳಲಿದೆ. ಅದಕ್ಕಾಗಿ ನನ್ನ ಕಡೆಯಿಂದ ಬೇಕಿರುವಂತ ಎಲ್ಲಾ ರೀತಿಯ ಸಹಾಯ ಮಾಡೋದಕ್ಕೆ ನಾನು ಸಿದ್ಧನಿರುವುದಾಗಿ ತಿಳಿಸಿದರು.
ಸಾಗರ ಉಪವಿಭಾಗೀಯ ಅಧಿಕಾರಿ ವೀರೇಶ್ ಕುಮಾರ್ ಮಾತನಾಡಿ, ಹಸಿರುವಲಯದಲ್ಲಿದ್ದಂತ ಜಾಗವನ್ನು ಶಿಕ್ಷಣ ಸಂಸ್ಥೆ, ಸಭಾಭವನಕ್ಕಾಗಿ ಶಾಸಕರು ವಾಣಿಜ್ಯ ಉದ್ದೇಶಕ್ಕೆ ಬಳಕೆಗೆ ಅವಕಾಶ ಮಾಡಿಕೊಟ್ಟಿರೋದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ. ಬಡವರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ಶಾಲೆ, ಸಭಾಭವನ ನಿರ್ಮಾಣವನ್ನು ಮಾರಿಕಾಂಬ ದೇವಸ್ಥಾನ ಸಮಿತಿಯಿಂದ ಮಾಡುತ್ತಿರುವುದು ಶ್ಲಾಘನೀಯವೇ ಸರಿ. ಬಡವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಶಿಕ್ಷಣ ಭಾಗ್ಯ, ಕಲ್ಯಾಣ ಭಾಗ್ಯವನ್ನು ಕರುಣಿಸಲಿ ಎಂದು ಆಶಿಸಿದರು.

ಸಾಗರ ನಗರಸಭೆಯ ಪೌರಾಯುಕ್ತ ಹೆಚ್.ಕೆ ನಾಗಪ್ಪ ಮಾತನಾಡಿ, ಹಸಿರು ವಲಯದ ಜಾಗವನ್ನು ವ್ಯವಸಾಯೇತರ ಉದ್ದೇಶಕ್ಕಾಗಿ ಶಾಸಕರು ಅವಕಾಶ ಮಾಡಿಕೊಟ್ಟಿದ್ದಾರೆ. ಶಾಲೆ, ಸಭಾಭವನ ನಿರ್ಮಾಣಕ್ಕೆ ಕೋಟಿ ಕೋಟಿ ಖರ್ಚು ಆಗಲಿ ಎಂಬುದು ಹಲವರ ಮಾತಾಗಿದೆ. ಅಷ್ಟು ಮಾರಿಕಾಂಬ ದೇವಸ್ಥಾನ ಸಮಿತಿಯಲ್ಲಿ ಇದ್ಯಾ ಎಂಬ ಅನುಮಾನವನ್ನು ಕೆಲವರು ವ್ಯಕ್ತ ಪಡಿಸಿದ್ದಾರೆ. ಆದರೇ ಶಾಸಕ ಗೋಪಾಲಕೃಷ್ಣ ಬೇಳೂರು ಜಾತ್ರೆಗೆ 2 ಕೋಟಿ ತಂದಿರೋರು, ಶಾಲೆ, ಸಭಾಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ತರೋದಿಲ್ವ? ತಂದೇ ತರುತ್ತಾರೆ. ಅದರಲ್ಲಿ ಯಶಸ್ವಿಯಾಗುತ್ತಾರೆ ಎನ್ನುವ ಭರವಸೆಯನ್ನು ವ್ಯಕ್ತ ಪಡಿಸಿದರು.
ಸಾಗರ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ನಾಗೇಂದ್ರ.ಕೆ.ಎನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿ ಮಾರಿ ಜಾತ್ರೆಗೆ ಅತೀ ದೊಡ್ಡ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆಯಿದೆ. ಅವರಿಗೆ ಎಲ್ಲಾ ಮೂಲಭೂತ ಸೌಲಭ್ಯ ಕಲ್ಪಿಸುವ ಕೆಲಸವನ್ನು ಕಮಿಟಿ, ತಾಲ್ಲೂಕು ಆಡಳಿತ ಮಾಡಿದೆ ಎಂದರು.

ಹಲವು ವರ್ಷಗಳ ಹಿಂದೆಯೇ ದೇವಾಲಯದಿಂದ ಈ ಹಿಂದಿನ ಕಮಿಟಿಯವರು 8.5 ಎಕರೆ ಜಮೀನನ್ನು 22 ಲಕ್ಷಕ್ಕೆ ಖರೀದಿಸಲಾಗಿತ್ತು. ಅದು ಹಸಿರು ವಲಯದಲ್ಲಿ ಇದ್ದ ಕಾರಣ ಯಾವುದೇ ಕಮರ್ಷಿಯಲ್ ಕೆಲಸಗಳಿಗೆ ಬಳಕೆ ಮಾಡೋದಕ್ಕೆ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಅದನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳೋದಕ್ಕೆ ಮಾರ್ಪಾಡು ಮಾಡಿಕೊಟ್ಟಿದ್ದಾರೆ ಅವರಿಗೆ ಕಮಿಟಿಯ ಪರವಾಗಿ ಕೃತಜ್ಞತೆಗಳನ್ನು ತಿಳಿಸಿದರು.
ಎಲ್ಲರ ಸಹಕಾರದೊಂದಿಗೆ ಮಾರಿಕಾಂಬ ದೇವಸ್ಥಾನ ಕಮಿಟಿಯಿಂದ ಶಾಲೆ, ಸಭಾಭವನ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಎಲ್ಲಾ ಸಮುದಾಯದ ಸಹಕಾರದಿಂದ ನಿರ್ಮಾಣ ಕಾರ್ಯವು ಮುಗಿಯುವ ನಿರೀಕ್ಷೆಯಿದೆ. ಇದಕ್ಕಾಗಿ ಸಹಕರಿಸಿದಂತ ಎಲ್ಲರಿಗೂ ಧನ್ಯವಾದಗಳು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಗಣೇಶ್ ಪ್ರಾರ್ಥಿಸಿದರು, ಎಸ್.ವಿ ಕೃಷ್ಣಮೂರ್ತಿ ಸ್ವಾಗತಿಸಿದರೇ, ನಾಗೇಂದ್ರ ಕುಮಟ ಪ್ರಸ್ತಾವಿಕ ನುಡಿಯಾಡಿದರೇ, ಸುಂದರ್ ಸಿಂಗ್ ನಿರೂಪಿಸಿ, ಎಲ್ಲರಿಗೂ ವಂದಿಸಿದರು. ಈ ವೇಳೆ ತಹಶೀಲ್ದಾರ್ ರಶ್ಮಿ, ಎಎಸ್ಪಿ ಡಾ.ಬೆನಕಪ್ರಸಾದ್, ಮಾರಿಕಾಂಬ ಸಮಿತಿಯ ಗಿರಿಧರ್ ರಾವ್, ಅರ್ಚಕ-ಪೋತರಾಜ ರವಿಕುಮಾರ್ ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು






