ಬೆಂಗಳೂರು : ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನದಂದು ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಗೋಪೂಜೆ ನಡೆಸುವಂತೆ ಧಾರ್ಮಿಕ ದತ್ತಿ ಇಲಾಖೆ ಸೂಚನೆ ನೀಡಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ಎಲ್ಲಾ ದೇವಾಲಯಗಳಲ್ಲಿ ಅ. 26 ರಂದು ಸಂಜೆ 5:30 ರಿಂದ 6:30 ರವರೆಗಿನ ಗೋಧೋಳಿ ಲಗ್ನದಲ್ಲಿ ಗೋಪೂಜೆ ನಡೆಸುವಂತೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆಯಂತೆ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಗೋಪೂಜೆ ಸಂಪ್ರದಾಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಗೋಪೂಜೆ ನಡೆಸುವಂತೆ ಸೂಚಿಸಲಾಗಿದೆ.
ಹಿಂದಿನ ಕಾಲದಿಂದಲೂ ಹಿಂದೂ ಧರ್ಮದವರು ಭಾರತ ದೇಶದಲ್ಲಿ ಗೋಮಾತೆಯನ್ನು ಕಾಲ ಕಾಲಕ್ಕೆ ಅನುಗುಣವಾಗಿ ಸೂಚಿಸಿಕೊಂಡು ಬರುತ್ತಿದ್ದಾರೆ. ಹಿಂದೂಗಳು ದೀಪಾವಳಿಯ (ಬಲಿಪಾಡ್ಯಮಿಯ) ದಿನದಂದು ಗೋವುಗಳಿಗೆ ಸ್ನಾನ ಮಾಡಿಸಿ, ಅರಿಶಿಣ, ಕುಂಕುಮ, ಹೂವುಗಳಿಂದ ಅಲಂಕರಿಸಿ, ಅಕ್ಕಿ ಬೆಲ್ಲ, ಸಿಹಿ ತಿನಿಸುಗಳನ್ನು ನೀಡಿ, ಪೂಜಾದಿಗಳನ್ನು ನಡೆಸಿಕೊಂಡು ಬರುತ್ತಿರುವುದನ್ನು ಈಗಲೂ ಕಾಣಬಹುದಾಗಿದೆ. ಕರ್ನಾಟಕದಲ್ಲಿಯೂ ಸಹ ಗೋಪೂಜೆಯನ್ನು ಬಲಿಪಾಡ್ಯಮಿಯಂದು ನಡೆಸಿಕೊಂಡು ಬರಲಾಗುತ್ತಿದೆ.
ಹಿಂದೂ ಧರ್ಮದಲ್ಲಿ ಗೋವುಗಳಿಗೆ ತಾಯಿಯ ಸ್ಥಾನವನ್ನು ನೀಡಿದ್ದು, ಗೋಮಾತೆ, ದೇವತೆ ಎಂದು ಭಾವಿಸಿ ಪೂಜಿಸಲಾಗುತ್ತದೆ. ಹಿಂದೂ ಧರ್ಮದ ಮರಾಣ ಉಪನಿಷತ್ತುಗಳಲ್ಲಿ ಗೋಮಾತೆಗೆ ವಿಶೇಷ ಸ್ಥಾನಮಾನವಿದೆ. ಗೋಮಾತೆಯನ್ನು ಪೂಜಿಸಿದರೆ ಅನೇಕ ಸಮಸ್ಯೆಗಳು ಪರಿಹಾರವಾಗುವುದರ ಜೊತೆಗೆ ವಾಸ್ತು ದೋಷವು ನಿವಾರಣೆಯಾಗುತ್ತದೆ ಎಂಬ ಬಲವಾದ ನಂಬಿಕೆ ನಮ್ಮ ಸಮಾಜದಲ್ಲಿದೆ.
* ಬೆಳಕಿನ ಹಬ್ಬ ದೀಪಾವಳಿಗೆ ಮಾರ್ಗಸೂಚಿ
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು, ಜನರಲ್ಲಿ ಸಡಗರ ಮನೆ ಮಾಡಿದೆ. ಇನ್ನೂ, ದೀಪಾವಳಿ ಹಬ್ಬದ ವೇಳೆ ಸಂಭವಿಸಬಹುದಾಗ ಪಟಾಕಿ ಅವಘಡ ಅಗ್ಬಿ ದುರಂತ ಹಾಗೂ ಇತರ ಅನಾಹುತಗಳನ್ನು ತಡೆಗಟ್ಟಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹಬ್ಬದ ವೇಳೆ ಯಾವೆಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರ ಕಚೇರಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಏನಿದೆ ಮಾರ್ಗಸೂಚಿಯಲ್ಲಿ..?
1) ಕಿರಿದಾದ ಮತ್ತು ವಾಣಿಜ್ಯ ಸಂಕೀರ್ಣಗಳ ಸ್ಥಳಗಳಲ್ಲಿ ಯಾವುದೇ ಖಾಯಂ ಅಂಗಡಿ ಅಥವಾ ಕಟ್ಟಡಗಳಲ್ಲಿ ಚಿಲ್ಲರೆ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲು, ಪಟಾಕಿಗಳ ದಾಸ್ತಾನು ಹಾಗೂ ಮಾರಾಟಕ್ಕೆ ಅನುಮತಿ ನೀಡಬಾರದು.
2) ಪಟಾಕಿಗಳನ್ನು ಸರ್ಕಾರದ ಅಧಿಕಾರಿಗಳು ನಿಗದಿಪಡಿಸಿದ ತೆರೆದ ಪ್ರದೇಶಗಳಲ್ಲಿ, ಅನುಮತಿ ನೀಡಿರುವ ತಾತ್ಕಾಲಿಕ ಮಳಿಗೆಗಳಲ್ಲಿ ಮಾತ್ರ ದಾಸ್ತಾನು ಮಾಡಲು ಹಾಗೂ ಮಾರಾಟ ಮಾಡಲು ಅನುಮತಿ ನೀಡಬಹುದು, ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.
3) ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಮಳಿಗೆಗಳನ್ನು ನಿರ್ಮಿಸಲು ಉಪಯೋಗಿಸುವ ಸಾಮಗ್ರಿಗಳು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ರೀತಿ ಇರಬಾರದು.
4) ಪ್ರತಿಯೊಂದು ಮಳಿಗೆಯಲ್ಲಿ ಅಗ್ನಿನಂದಕ ಹಾಗೂ ಎರಡು ಬಕೆಟ್ಗಳಲ್ಲಿ ನೀರನ್ನು ಇಟ್ಟಿರಬೇಕು. ಪ್ರತಿಯೊಂದು ಮಳಿಗೆ ಪಕ್ಕದಲ್ಲಿ ಎರಡು ಡ್ರಮ್ನಲ್ಲಿ ಕನಿಷ್ಟ 400 ಲೀಟರ್ ನೀರನ್ನು ಶೇಖರಿಸಿಟ್ಟಿರಬೇಕು.
5) ಅನಧಿಕೃತ ಪಟಾಕಿ ಮಾರಾಟದ ವ್ಯವಹಾರವು ಗಮನಕ್ಕೆ ಬಂದರೆ ಕೂಡಲೇ ಸಂಬಂಧಪಟ್ಟ ಪರವಾನಿಗೆ ನೀಡುವ ಅಧಿಕಾರಿಗಳ ಗಮನಕ್ಕೆ ತರತಕ್ಕದ್ದು.
6) ಮಳಿಗೆಯಲ್ಲಿ ಧೂಮಪಾನಕ್ಕೆ ಅವಕಾಶ ನೀಡಬಾರದ ಹಾಗೂ ಸಂಬಂಧಿತ ಸೂಚನಾ ಫಲಕವನ್ನು ಹಾಕಿರಬೇಕು. ರಾತ್ರಿ ವೇಳೆ ಮಳಿಗೆಯಲ್ಲಿ ಯಾರೂ ಮಲಗಬಾರದೆಂದು ಸೂಚನೆ ನೀಡಬೇಕು.
7) ಅಗ್ನಿಶಾಮಕ ಠಾಣೆಯಲ್ಲಿ ಎಲ್ಲಾ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟಿರಬೇಕು ಹಾಗೂ ಯಾವುದೇ ಕರೆ ಬಂದರೆ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು. ದೀಪಾವಳಿ ಸಮಯದಲ್ಲಿ ಅಧಿಕಾರಿ/ ಸಿಬ್ಬಂದಿಗಳಿಗೆ ತುರ್ತು ಸಂದರ್ಭ ಹೊರತು ಪಡಿಸಿ ಯಾವುದೇ ರಜೆ, ವಾರದ ರಜೆಯನ್ನು ನೀಡಬಾರದು
8) ಅಧಿಕಾರಿಗಳು ಹಾಗೂ ಕರ್ತವ್ಯದಲ್ಲಿನ ಸಿಬ್ಬಂದಿಗಳು ಸದಾ ಜಾಗರೂಕರಾಗಿರಬೇಕು. ಠಾಣೆಯನ್ನು ಬಿಟ್ಟು ಇತರೆ ಕೆಲಸಗಳಿಗೆ ಹೊರ ಹೋಗಬಾರದು ಹಾಗೂ ಸದಾ 24 ಗಂಟೆಗಳಲ್ಲೂ ಕರೆಗೆ ಹಾಜರಾಗಲು ಲಭ್ಯವಿರಬೇಕು ಎಂದು ಸೂಚನೆ ನೀಡಲಾಗಿದೆ.