ಕಲಬುರಗಿ : ಅತಿವೃಷ್ಠಿಯಿಂದ ಹಾಳಾದ ಬೆಳೆಗಳಿಗೆ ರಾಜ್ಯ ಸರ್ಕಾರ ಗುರುವಾರ ಎರಡನೇ ಕಂತಿನ ಪರಿಹಾರ ಬಿಡುಗಡೆ ಮಾಡಿದ್ದು, ಕಲಬುರಗಿ ಜಿಲ್ಲೆಯ 50,158 ರೈತರಿಗೆ 43.70 ಕೋಟಿ ರೂ. ಪರಿಹಾರ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.
BIGG NEWS : ಪೋಕ್ಸೋ ಪ್ರಕರಣ : ಇಂದು ಕೋರ್ಟ್ ನಲ್ಲಿ ಮುರುಘಾಶರಣರ ಜಾಮೀನು ಅರ್ಜಿ ವಿಚಾರಣೆ
ಕಳೆದ ಜುಲೈ-ಆಗಸ್ಟ್ ಮಾಹೆಯಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ 1,11,400 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯನ್ನು ಜಂಟಿ ಸಮೀಕ್ಷೆ ಮೂಲಕ ಅಂದಾಜಿಸಿ, ಬೆಳೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಮೊದಲನೇ ಕಂತಿನ ರೂಪದಲ್ಲಿ ಕಳೆದ ಸೆಪ್ಟೆಂಬರ್ 7 ರಂದು ಜಿಲ್ಲೆಯ 33,487 ರೈತರಿಗೆ 30.79 ಕೋಟಿ ರೂ. ರೈತರ ಖಾತೆಗೆ ಪರಿಹಾರದ ಹಣ ಬಿಡುಗಡೆ ಮಾಡಲಾಗಿತ್ತು. ಇದೀಗ ಒಂದೇ ವಾರದ ಅವಧಿಯಲ್ಲಿ ಎರಡನೇ ಕಂತಿನ ಹಣ ಸಹ ಸರ್ಕಾರ ಬಿಡುಗಡೆ ಮಾಡಿದ್ದು, ಇದೂವರೆಗೆ ಒಟ್ಟಾರೆ ಜಿಲ್ಲೆಯ 83,645 ರೈತರಿಗೆ 74.49 ಕೋಟಿ ರೂ. ಪರಿಹಾರ ನೀಡಿದಂತಾಗಿದೆ. ಇದು ರಾಜ್ಯದಲ್ಲಿಯೇ ದಾಖಲೆ ಪ್ರಮಾಣದಲ್ಲಿ ಜಿಲ್ಲೆಗೆ ಅತಿ ಹೆಚ್ಚಿನ ಪರಿಹಾರ ಬಿಡುಗಡೆಯಾಗಿದೆ ಎಂದು ಡಿ.ಸಿ. ಯಶವಂತ ವಿ. ಗುರುಕರ್ ತಿಳಿಸಿದರು.