ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೇಂದ್ರ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಭರ್ಜರಿ ಸಿಹಿಸುದ್ದಿ ನೀಡಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ರೈಲ್ವೆ ಇಲಾಖೆಯಲ್ಲಿ 60,000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಖಂಡ ಕರ್ನಾಟಕ ರಾಜ್ಯಕ್ಕೆ ʼಕರ್ನಾಟಕʼ ಎಂಬ ಹೆಸರು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆಯು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ʼಹೆಸರಾಯಿತು ಕರ್ನಾಟಕʼ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ನಾಲ್ಕು ತಿಂಗಳಲ್ಲಿ ರೈಲ್ವೆ ಇಲಾಖೆಯಲ್ಲಿ 60,000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಮೊದಲು ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ರೈಲ್ವೆ ಇಲಾಖೆ ಪರೀಕ್ಷೆ ನಡೆಯುತ್ತಿದ್ದವು. ನಾನು ಸಚಿವನಾದ ಬಳಿಕ ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡರ ನಿರಂತರ ಹೋರಾಟವೂ ಕಾರಣವಾಗಿದೆ. ರೈಲ್ವೇ ನೇಮಕಾತಿ ಪರೀಕ್ಷೆ ಪ್ರಾದೇಶಿಕ ಭಾಷೆಗಳಲ್ಲಿಯೂ ನಡೆಯಲಿವೆ. ಇದನ್ನು ಬಳಸಿಕೊಂಡು ಶೇಕಡ 20ರಿಂದ 25ರಷ್ಟು ಕನ್ನಡಿಗರು ಆಯ್ಕೆಯಾದರೆ ಹೋರಾಟದ ಶ್ರಮ ಸಾರ್ಥಕವಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಮಾರಂಭದಲ್ಲಿ, ಡಂಬಳ-ಗದಗ ಮಠದ ಪರಪಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿಗಳವರು, ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳವರು, ಗೌರಿಗದ್ದೆಯ ಅವಧೂತ ಶ್ರೀ ವಿನಯ್ ಗುರೂಜಿಯವರು, ಕರ್ನಾಟಕ ರಕ್ಷಣಾ ವೇದಿಕೆಯ ಶ್ರೀ ಟಿ.ಎ ನಾರಾಯಣಗೌಡರು ಹಾಗೂ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.