ಕೊಪ್ಪಳ: ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಸ್ಕೂಲ್(KPS) ಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಮಕ್ಕಳು ಓದುತ್ತಿದ್ದಾರೆ. ಎಲ್ಕೆಜಿಯಿಂದ ಪಿಯುಸಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಈ ಶಾಲೆಯ ಮಕ್ಕಳಿಗೆ ಅನುಕೂಲ ಕಲ್ಪಿಸಲು ಉಚಿತವಾಗಿ ಬಸ್ ವ್ಯವಸ್ಥೆ ಆರಂಭಿಸಲು ಸರ್ಕಾರ ತೀರ್ಮಾನ ನಿರ್ಧಾರ ಕೈಗೊಂಡಿದೆ. ಯಾವ ಭಾಗದಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಉಚಿತ ಬಸ್ ವ್ಯವಸ್ಥೆಗಳನ್ನು ಮೊದಲು ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಕೆಲಸಗಳು ಆಗುತ್ತಿವೆ. ರಾಜ್ಯ ಸರ್ಕಾರ ಮತ್ತು ಅಜೀಮ್ ಪ್ರೇಮಜಿ ಫೌಂಡೇಶನ್ ಸಹಯೋಗದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ಮತ್ತು ಬಾಳೆ ಹಣ್ಣುಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಮಕ್ಕಳಿಗೆ ಬಿಸಿಊಟ, ಹಾಲು, ಪಠ್ಯ ಪುಸ್ತಕ, ಸಮವಸ್ತ್ರದೊಂದಿಗೆ ಶೂಗಳು ಮತ್ತು ಸಾಕ್ಸ್ ಹಾಗೂ ವಿಶೇಷವಾಗಿ ಮಕ್ಕಳ ಪೌಷ್ಠಿಕ ಬೆಳವಣಿಗೆಗೆ ರಾಗಿ ಮಾಲ್ಟ್ ಕೊಡಲಾಗುತ್ತಿದೆ. ಒಂದು ಸಮೀಕ್ಷಾ ವರದಿ ಪ್ರಕಾರ ರಾಜ್ಯದಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ ಮಕ್ಕಳ ಪೌಷ್ಠಿಕತೆ ಉನ್ನತ ಸ್ಥಾನವನ್ನು ಪಡೆದಿದೆ. ಉತ್ತಮ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿದ್ದು, ಇಲ್ಲಿ ಓದುವ ಮಕ್ಕಳೆಲ್ಲ ಪುಣ್ಯವಂತರು. ಸರ್ಕಾರಿ ಶಾಲೆಗಳಲ್ಲಿ ಓದಿದವರೆಲ್ಲ ಉನ್ನತ ಸ್ಥಾನಗಳಲ್ಲಿದ್ದಾರೆ. ಇಂದಿನ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಹ ಓದಿರುವುದು ಒಂದು ಸರ್ಕಾರಿ ಶಾಲೆಯಲ್ಲಿಯೆ. ಸರ್ಕಾರಿ ಶಾಲೆಗಳ ಮಕ್ಕಳು ಚೆನ್ನಾಗಿ ಓದಿ ಬುದ್ದಿವಂತರಾಗಬೇಕು. ನಮ್ಮ ಸರ್ಕಾರ ಬಂದ ನಂತರ ಕೇವಲ 11 ತಿಂಗಳಲ್ಲಿ 12,500 ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಹಂತ ಹಂತವಾಗಿ ಶಿಕ್ಷಕರ ಕೊರತೆಯನ್ನು ನೀಗಿಸಲಾಗುವುದು. ಮಕ್ಕಳ ಭವಿಷ್ಯಕ್ಕಾಗಿ ಬೇಕಾಗುವ ಶಿಕ್ಷಣದ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರವು ಬದ್ಧವಾಗಿದೆ ಎಂದರು.
ಮಕ್ಕಳ ಸೇವೆ ಮಾಡಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ನನಗೆ ಶಿಕ್ಷಣ ಇಲಾಖೆಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಕೆ.ಪಿ.ಎಸ್. ಶಾಲೆಗಳನ್ನು ಪ್ರಾರಂಭಿಸಲಿದ್ದೇವೆ ಹಾಗೂ ಅವಶ್ಯವಿರುವಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ಕಾಲೇಜುಗಳನ್ನು ಮಾಡಿಕೊಡಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುಧಾನದಲ್ಲಿ ಶೇ. 25ರಷ್ಟನ್ನು ಶಿಕ್ಷಣಕ್ಕಾಗಿಯೇ ಮೀಸಲಿಡಲಾಗಿದೆ. ಪರೀಕ್ಷೆಯಲ್ಲಿ ಕಾಪಿ ಮಾಡುವುದನ್ನು ತಡೆಯಲು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಇದರಿಂದ ಕೆಲ ಮಕ್ಕಳು ಪೇಲ್ ಆಗುತ್ತಿರಬಹುದು. ಆದರೆ, ಭವಿಷ್ಯದಲ್ಲಿ ಮಕ್ಕಳು ಯಾವುದೇ ರೀತಿಯಲ್ಲಿ ಸೋಲುವುದಿಲ್ಲ. ಮೂರು ಪರೀಕ್ಷಾ ಸೂತ್ರವನ್ನು ಜಾರಿಗೆ ತರಲಾಗಿದ್ದು, ಈ ವ್ಯವಸ್ಥೆಯ ಮಹತ್ವವು ಮುಂಬರುವ ದಿನಗಳಲ್ಲಿ ತಿಳಿಯಲಿದೆ. ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಮಕ್ಕಳಲ್ಲಿ 84,400 ಕ್ಕಿಂತಲು ಹೆಚ್ಚು ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆ-2ರಲ್ಲಿ ಉತ್ತೀರ್ಣರಾಗಿ ಶಿಕ್ಷಣ ಇಲಾಖೆಯ ಗೌರವನ್ನು ಹೆಚ್ಚಿಸಿದ್ದಾರೆ. ಇದರಲ್ಲಿ ಸರ್ಕಾರಿ ಶಾಲೆಗಳು ಮೊದಲ ಸ್ಥಾನದಲ್ಲಿದ್ದು, ಅನುದಾನಿತ ಮತ್ತು ಖಾಸಗಿ ಶಾಲೆಗಳು 2ನೇ ಮತ್ತು 3ನೇ ಸ್ಥಾನದಲ್ಲಿವೆ. ಸದ್ಯ 3ನೇ ಪರೀಕ್ಷೆಯು ನಡೆಯುತ್ತಿದೆ ಎಂದು ಹೇಳಿದರು.