ಮಡಿಕೇರಿ : ರಾಜ್ಯದಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸುವಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆ ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರತಿ ಎಕರೆಗೆ 250 ರೂ ಗಳಂತೆ ಗರಿಷ್ಟ ಐದು ಎಕರೆಗೆ ಡಿ.ಬಿ.ಟಿ ಮೂಲಕ ಡೀಸೆಲ್ಗೆ ಸಹಾಯಧನವನ್ನು ನೀಡಲು “ರೈತ ಶಕ್ತಿ” ಎಂಬ ಹೊಸ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ.
ರೈತ ಶಕ್ತಿ ಯೋಜನೆಗೆ ಒಳಪಡುವ ಅಂಶಗಳು: ಪ್ರೂಟ್ಸ್ ಪೋರ್ಟಲ್ನಲ್ಲಿ ನೋಂದಣಿಗೊಂಡ ಎಲ್ಲಾ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯು ಅರ್ಹತಾಧಾರಿತ ಯೋಜನೆ ಆಗಿರುವುದರಿಂದ ಯಾವುದೇ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ, ದಾಖಲೆಗಳ ಪರಿಶೀಲನೆಯನ್ನು ಸರ್ಕಾರದ ಪ್ರೂಟ್ಸ್ ಪೋರ್ಟಲ್ನಲ್ಲಿ ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ಮಾಡಲಾಗುವುದು. ಸಂಘ ಸಂಸ್ಥೆ/ ಸ್ವಸಹಾಯ ಗುಂಪುಗಳು/ ಟ್ರಸ್ಟ್ ಗಳು/ ಸಂಸ್ಥೆಗಳ ಹೆಸರಿನಲ್ಲಿರುವ ಭೂ ಒಡೆತನಗಳಿಗೆ ಸಹಾಯಧನ ಒದಗಿಸಲು ಅವಕಾಶವಿರುವುದಿಲ್ಲ.
ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಾವಣಿಗೊಂಡ ರೈತರು ಹೊಂದಿರುವ ಭೂಹಿಡುವಳಿಯ ಆಧಾರದ ಮೇಲೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ ರೂ.250 ರಂತೆ ಗರಿಷ್ಟ ಐದು ಎಕರೆಗೆ ಮಾತ್ರ ಮಿತಿಗೊಳಿಸಿ ರೂ.1250 ರವರೆಗೆ ಡೀಸೆಲ್ ಸಹಾಯಧನ ಮಿತಿಗೊಳಿಸಿದೆ.
ಒಂದು ಎಕರೆವರೆಗೆ(<=1.00 ಎಕರೆ) ರೂ.250, ಎರಡು ಎಕರೆವರೆಗೆ(1 ರಿಂದ 2 ಎಕರೆ) ರೂ.500, ಮೂರು ಎಕರೆವರೆಗೆ(2 ರಿಂದ 3 ಎಕರೆ) ರೂ.750, ಮೂರು ಎಕರೆವರೆಗೆ(3 ರಿಂದ 4 ಎಕರೆ) ರೂ.1000 ಹಾಗೂ ನಾಲ್ಕು ಎಕರೆ ಮೇಲ್ಪಟ್ಟು(>4.00) ರೂ.1250.
ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಒಟ್ಟು 67,296 ರೈತರು ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಆಗಿದ್ದು, 2,59,796 ತಾಕುಗಳಲ್ಲಿ ಈಗಾಗಲೇ 1,55,790 ಪ್ರೂಟ್ಸ್ ತಂತ್ರಾಂಶಕ್ಕೆ ತಾಕುಗಳು ಸೇರ್ಪಡೆಯಾಗಿದೆ. ಇದುವರೆವಿಗೆ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣೆಯಾಗದ ರೈತರು ನೊಂದಣೆ ಮಾಡಿಕೊಳ್ಳಲು ಹಾಗೂ ಈಗಾಗಲೇ ನೊಂದಣೆ ಮಾಡಿಕೊಂಡಿರುವ ರೈತರು ತಮ್ಮ ಎಲ್ಲಾ ಜಮೀನಿನ ವಿವರಗಳನ್ನು ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳುವಂತೆ ಕೃಷಿ ಇಲಖೆಯ ಜಂಟಿ ಕೃಷಿ ನಿರ್ದೇಶಕರಾದ ಶಬಾನಾ ಎಂ.ಷೇಕ್ ಅವರು ತಿಳಿಸಿದ್ದಾರೆ.