ರಾಜ್ಯ ಸರಕಾರಿ ನೌಕರರಿಗೆ ಕರ್ನಾಟಕ ಸರಕಾರದ ವಿಮಾ ಇಲಾಖೆಯಲ್ಲಿ ವಿಮೆ ಹೊಂದಿರುವ ವಿಮೆದಾರರಿಗೆ ಅಂದರೆ ದಿನಾಂಕ:1-4-2022 ರಿಂದ 31-3-2024 ರ ಅವಧಿಯಲ್ಲಿ ಚಾಲ್ತಿಯಲ್ಲಿರುವ, ಮ್ಯಾಚುರಿಟಿ (ಫಲಪ್ರದ) ಆಗಿರುವ ಸುಮಾರು 2,243 ವಿಮೆಗಳಿಗೆ ರೂ.1000 ಗಳಿಗೆ ರೂ.80 ರಂತೆ ಲಾಭಾಂಶ (ಬೊನಸ್) ನೀಡಲಾಗುತ್ತಿದ್ದು, ಬರುವ ಡಿಸೆಂಬರ್ 15 ರೊಳಗೆ ನೇರವಾಗಿ ವಿಮೆದಾರರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಧಾರವಾಡ ಜಿಲ್ಲಾ ವಿಮಾ ಅಧಿಕಾರಿ ಜಗನ್ನಾಥ. ಸಿ.ಕಠಾರೆ ಅವರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ನಿಯಮಾನುಸಾರ ವಿಮೆದಾರರಿಗೆ ಬೋನಸ್ ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಜರುಗಿದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕೆಜಿಐಡಿ ಸಿಬ್ಬಂದಿಗಳನ್ನು ನೇಮಿಸಿದ್ದರಿಂದ ವಿಳಂಬವಾಗಿದ್ದು, ಈಗ ಪ್ರತಿ ದಿನ ಹಂತ ಹಂತವಾಗಿ ಖಜಾನೆ ಮೂಲಕ ವಿಮೆದಾರರಿಗೆ ಬೋನಸ್ ಜಮೆ ಆಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯ ವಿಮಾದಾರ 2,243 ಸರಕಾರಿ ನೌಕರರ ಪೈಕಿ ಸುಮಾರು 600 ಜನರ ಖಾತೆಗೆ ಬೋನಸ್ ಪಾವತಿ ಆಗಿದೆ. ಉಳಿದ 1,643 ನೌಕರದಾರರಿಗೆ ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಮತ್ತು ಕೌಶಲ್ಯಭರಿತ ಸಿಬ್ಬಂದಿ ಕೊರತೆ, ಆನ್ಲೈನ್ ದಾಖಲಾತಿ, ವಿಮೆ ಪರಿಶೀಲನೆ ಕಾರ್ಯ ಬಹಳಷ್ಟಿರುವದರಿಂದ ತಾಂತ್ರಿಕ ಕಾರಣಗಳಿಂದ ಬೊನಸ್ ಜಮೆ ಕಾರ್ಯಕ್ಕೆ ಹೆಚ್ಚು ಕಾಲವಕಾಶ ಹಿಡಿಯುತ್ತಿದೆ. ಆದರೂ ಸಹ ಡಿಸೆಂಬರ್ ಎರಡನೇಯ ವಾರದೊಳಗೆ ದಿನಾಂಕ:1-4-2022 ರಿಂದ 31-3-2024 ರ ಅವಧಿಯಲ್ಲಿ ಚಾಲ್ತಿಯಲ್ಲಿರುವ, ಮ್ಯಾಚುರಿಟಿ (ಫಲಪ್ರದ) ಆಗಿರುವ ಸುಮಾರು 2,243 ವಿಮೆಗಳಿಗೆ ಖಜಾನೆ ಮೂಲಕ ನೇರವಾಗಿ ಅವರ ಖಾತೆಗಳಿಗೆ ಬೋನಸ್ ಮಾಡಲಾಗುತ್ತದೆ. ಜಿಲ್ಲೆಯ ಎಲ್ಲ ಸರಕಾರಿ ನೌಕರರು ಸಹಕಾರ ನೀಡಬೇಕೆಂದು ಜಿಲ್ಲಾ ವಿಮಾ ಅಧಿಕಾರಿ ಜಗನ್ನಾಥರಾವ್ ಸಿ.ಕಠಾರೆ ಅವರು ತಿಳಿಸಿದ್ದಾರೆ.








