ನವದೆಹಲಿ : ದೈನಿಕ ಸ್ಥಳೀಯ ಹವಾಮಾನ ಮುನ್ಸೂಚನೆಯ ಸೇವೆಯನ್ನು ಗ್ರಾಮ ಪಂಚಾಯತಿಗಳಿಗೆ ಒದಗಿಸುವ ಉಪಕ್ರಮಕ್ಕೆ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ಗುರುವಾರ ಚಾಲನೆ ನೀಡಲಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಜತೆ ಸೇರಿ ಈ ಸೇವೆಯನ್ನು ಆರಂಭಿಸಲಾಗಿದೆ.
ಪ್ರತಿ ಗಂಟೆಗೂ ಹವಾಮಾನದ ಪರಿಸ್ಥಿತಿ ಪರಿಶೀಲಿಸಲು ಇದು ನೆರವಾಗಲಿದ್ದು, ದೇಶದ ರೈತರು ಮತ್ತು ಗ್ರಾಮಸ್ಥರಿಗೆ ಲಾಭವಾಗಲಿದೆ ಎಂದು ಸಚಿವಾಲಯ ಬುಧವಾರ ತಿಳಿಸಿದೆ. ಚಾಲನೆ ಕಾರ್ಯಕ್ರಮದಲ್ಲಿ ಪಂಚಾಯತ್ ಸಚಿವ ರಾಜೀವ್ ರಂಜನ್ ಸಿಂಗ್ ಲಲನ್ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನಗಳ ಸಚಿವ ಜಿತೇಂದ್ರ ಸಿಂಗ್ ಭಾಗವಹಿಸಲಿದ್ದಾರೆ. ಸರ್ಕಾರದ 100 ದಿನಗಳ ಕಾರ್ಯಸೂಚಿ ಭಾಗವಾದ ಈ ಉಪಕ್ರಮವು ತಳಮಟ್ಟದ ಆಡಳಿತವನ್ನು ಬಲಪಡಿಸಲಿದೆ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳನ್ನು ಪ್ರವರ್ತಿಸಲಿದೆ ಎಂದು ಸರ್ಕಾರ ಹೇಳಿದೆ.