ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಇದೀಗ ಕರ್ನಾಟಕ ಲೋಕಸೇವಾ ಆಯೋಗವು ಸಿಹಿ ಸುದ್ದಿ ಒಂದನ್ನು ನೀಡಿದ್ದು, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಮತ್ತು ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕನ್ನಡ ಕಡ್ಡಾಯ ಪರೀಕ್ಷೆ ಬರೆದಿರುವಂತಹ ಅಭ್ಯರ್ಥಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ‘ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ’ ವಿನಾಯಿತಿ ನೀಡಿರುವುದಾಗಿ ಪ್ರಕಟಿಸಿದೆ.
ಎಸ್ಸೆಸ್ಸೆಲ್ಸಿ ಅಥವಾ ರಾಜ್ಯ ಸರ್ಕಾರವು ಅದಕ್ಕೆ ತತ್ಸಮಾನವೆಂದು ಘೋಷಿಸಿದ ಯಾವುದೇ ಪರೀಕ್ಷೆಯಲ್ಲಿ ಕನ್ನಡ ವಿಷಯವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಿರುವ, ಈ ಹಿಂದೆ ಆಯೋಗ ಅಥವಾ ಯಾವುದೇ ಆಯ್ಕೆ ಪ್ರಾಧಿಕಾರವು ನಡೆಸಿದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಈ ನಿಯಮ ಅನ್ವಯವಾಗಲಿದೆ ಎಂದು ತಿಳಿಸಿದೆ.
ಸಾರಿಗೆ ಇಲಾಖೆಯಲ್ಲಿನ ಮೋಟಾರು ವಾಹನ ನಿರೀಕ್ಷಕರು ಉಳಿಕೆ ಮೂಲವೃಂದದ 70 ಮತ್ತು ಹೈದರಾಬಾದ್ ಕರ್ನಾಟಕ ವೃಂದದ 6 ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯ ಟ್ಯಾಬ್‌ನಲ್ಲಿ ಏ.24ರೊಳಗೆ ಮಾಹಿತಿ ನವೀಕರಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಿರುವವರು ಮಾತ್ರವಲ್ಲದೆ, ಕೇವಲ ಒಂದು ಟೈಮ್ ರಿಜಿಸ್ಟ್ರೇಷನ್ (ಒಟಿಆರ್) ಮಾಡಿರುವ ಅಭ್ಯರ್ಥಿಗಳು ಕೂಡ http://kpsconline. karnataka.gov.in/login/logi ಮೂಲಕ ವೈಯಕ್ತಿಕ ವಿವರ ಸಲ್ಲಿಸುವಂತೆ ಕೆಪಿಎಸ್‌ಸಿ ಕಾರ್ಯದರ್ಶಿ ತಿಳಿಸಿದ್ದಾರೆ.