ಮೈಸೂರು : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 2,446 ಅರ್ಹ ಫಲಾನುಭವಿಗಳಿಗೆ ಮೈಸೂರು ವಿಮಾನ ನಿಲ್ದಾಣದ ಹಿಂಭಾಗದ ಮಂಡಕಳ್ಳಿ-ದಡದಹಳ್ಳಿ ರಸ್ತೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರು ಜು.23ರಂದು ಸಂಜೆ 4 ಗಂಟೆಗೆ ಬೃಹತ್ ವಸತಿ ಸಮುಚ್ಚಯಕ್ಕೆ ಶಂಕುಸ್ಥಾಪನೆ ನೆರವೇರಿಸುವರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ಸರ್ಕಾರಿ ಸ್ವಾಮ್ಯದ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಆರ್ ಜಿಎಚ್ ಸಿಎಲ್) ಅನುಷ್ಠಾನಗೊಳಿಸಲಿರುವ ಬೃಹತ್ ವಸತಿ ಯೋಜನೆಯನ್ನು ಪಿಎಂಎವೈ-ಎಚ್ ಎಫ್ ಎ (ನಗರ) – ಪ್ರಧಾನ ಮಂತ್ರಿ ಆವಾಸ್ ಯೋಜನೆ – ಎಲ್ಲರಿಗೂ ವಸತಿ – ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ವಸತಿ ಸಚಿವ ವಿ.ಸೋಮಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ, ಮೈಸೂರು ಮೇಯರ್ ಸುನಂದಾ ಪಾಲನೇತ್ರ ಮತ್ತು ಇತರ ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಜಿ+1 ಮತ್ತು ಜಿ+2 ಮಾದರಿಯ ಮನೆಗಳು, ಜಿ+1 ಮಾದರಿಯ 6 ಬ್ಲಾಕ್ ಗಳು ಮತ್ತು ಜಿ+2 ಮಾದರಿಯ 176 ಬ್ಲಾಕ್ ಗಳನ್ನು ಹೊಂದಿದ್ದು, 182 ಬ್ಲಾಕ್ ಗಳಿಂದ (176+6) ಒಟ್ಟು 2,160 ಘಟಕಗಳನ್ನು ಹೊಂದಿರುತ್ತವೆ. ಪ್ರತಿ ಬ್ಲಾಕ್ ನೆಲಮಹಡಿ, ಎರಡನೇ ಮಹಡಿ ಮತ್ತು ಟೆರೇಸ್ (ಮೆಟ್ಟಿಲು ಹೆಡ್ ರೂಮ್) ಅನ್ನು ಹೊಂದಿರುತ್ತದೆ ಎಂದು ಸೂಚಿಸಿದ ಅವರು, ಒಟ್ಟು ಸೂಪರ್ ಬಿಲ್ಟ್ ಅಪ್ ಪ್ರದೇಶವು 409.59 ಚದರ ಮೀಟರ್ ಆಗಿದೆ ಎಂದು ಹೇಳಿದರು. ಈ ಯೋಜನೆಯು 33 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದ್ದು, ಯೋಜನೆಯ ಅಂದಾಜು ವೆಚ್ಚ 168.45 ಕೋಟಿ ರೂ.ಗಳಾಗಿವೆ ಎಂದು ಜಿ.ಟಿ. ದೇವೇಗೌಡ ಮಾಹಿತಿ ನೀಡಿದ್ದಾರೆ.