ಬೆಂಗಳೂರು : ಬಗರ್ ಹುಕುಂ ಸಾಗುವಳಿದಾರರಿಗೆ ಇದೀಗ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಶೀಘ್ರದಲ್ಲೇ ಎಲ್ಲಾ ಬಗರ್ ಹುಕುಂ ಸಾಗುವಳಿದಾರರಿಗೆ ‘ಸಾಗುವಳಿ ಚೀಟಿ’ ವಿತರಿಸಲಾಗುತ್ತದೆ ಎಂದು ಕಂದಾಯ ಇಲಾಖೆಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಈ ಕುರಿತು ‘ಬಗರ್ ಹುಕುಂ’ ಪ್ರಗತಿ ಪರಿಶೀಲನೆಗೆ ಸಂಬಂಧಿಸಿ ರಾಜ್ಯದ ಎಲ್ಲಾ ತಹಶೀಲ್ದಾರರುಗಳ ಜೊತೆ ವಿಕಾಸಸೌಧದಿಂದ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಿತು.ಸಭೆಯಲ್ಲಿ ಶೀಘ್ರ ಬಗರ್ ಹುಕುಂ ಸಭೆ ನಡೆಸಿ ಅರ್ಹರಿಗೆ ಶೀಘ್ರ ಭೂ ಮಂಜೂರುಗೊಳಿಸಿ ಸಾಗುವಳಿ ಚೀಟಿ ನೀಡಲು ಸಚಿವ ಕೃಷ್ಣಭೈರೇಗೌಡ ಅವರು ತಹಶೀಲ್ದಾರರಿಗೆ ಸೂಚಿಸಿದರು.
ಸಭೆಯ ಬಳಿಕ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, “ಬಗರ್ ಹುಕುಂ” ಮಂಜೂರಾತಿ ಬಡವರ ಕೆಲಸ. ಬಡವರಿಗೆ ಅರ್ಹ ಫಲಾನುಭವಿಗಳಿಗೆ ಕಾನೂನು ಬದ್ಧವಾಗಿ ಭೂ ಮಂಜೂರುಗೊಳಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಇದೇ ಕಾರಣಕ್ಕೆ ನಾನು ಕಳೆದ ಒಂದು ವರ್ಷದಿಂದ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದೇನೆ. ರಾಜ್ಯದ ಎಲ್ಲಾ ತಹಶೀಲ್ದಾರರ ಜೊತೆ ಪ್ರತಿ ತಿಂಗಳೂ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಸಭೆ ನಡೆಸಿ ಪರಿಶೀಲಿಸುತ್ತಿದ್ದೇನೆ.
ಆದರೂ ಕೆಲವು ತಹಶೀಲ್ದಾರರು ಬಡವರ ಕೆಲಸದ ಬಗ್ಗೆ ಅಸಡ್ಡೆ ಧೋರಣೆ ತೋರುತ್ತಿರುವುದು ವಿಷಾದನೀಯ. ಹೀಗಾಗಿ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ತಹಶೀಲ್ದಾರರಾದ ರಮೇಶ್ ಅವರಿಗೆ ನೊಟೀಸ್ ಜಾರಿಗೊಳಿಸುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.