ಬೆಂಗಳೂರು : ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್ ಹೊಂದಿರುವವರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಆಯುಷ್ಮಾನ್ ಕಾರ್ಡ್ ಹೊಂದಿರುವವರು ದೇಶಾದ್ಯಂತ ಸುಲಭವಾಗಿ ವೈದ್ಯಕೀಯ ಸೇವೆ ಪಡೆಯಬಹುದಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸೆಪ್ಟೆಂಬರ್ 30 ರವರೆಗೆ ಆಯುಷ್ಮಾನ್ ಪಾಕ್ಷಿಕ ಹಮ್ಮಿಕೊಳ್ಳಲಾಗಿದ್ದು, ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ವೈದ್ಯಕೀಯ ಸೌಲಭ್ಯ ಪಡೆಯಲು ಆರೋಗ್ಯ ಕಾರ್ಡ್ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ತಿಳಿಸಿದೆ. ರೋಗಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಆನ್ ಲೈನ್ ಮೂಲಕವೇ ಮೇಲ್ದರ್ಜೆ ಆಸ್ಪತ್ರೆಗೆ ರೆಫರಲ್ ಮಾಡಲು ಈ ಕಾರ್ಡ್ ಸಹಕಾರಿಯಾಗಲಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ 1,650 ಚಿಕಿತ್ಸಾ ಪ್ಯಾಕೇಜ್ ಗಳಿದ್ದು, ಇನ್ನೂ ಹೆಚ್ಚಿನ ಚಿಕಿತ್ಸೆಗೆ ಅವಕಾಶ ಕಲ್ಪಿಸಲು ಚಿಂತನೆ ನಡೆದಿದೆ. ಆಧಾರ್ ಜೋಡಣೆಯಾಗಿರುವ ಪಡಿತರ ಚೀಟಿ ಆಧಾರದ ಮೇಲೆ ಉಚಿತವಾಗಿ ಆಯುಷ್ಮಾನ್ ಕಾರ್ಡ್ ವಿತರಿಸಲಾಗುವುದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.