ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಆಧಾರ್ ಸೀಡಿಂಗ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಗ್ರಾಮ ಸಹಾಯಕರು ಮತ್ತು ಗ್ರಾಮ ಲೆಕ್ಕಿಗರಿಗೆ 4.5 ಕೋಟಿ ರೂ. ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ವಿಕಾಸಸೌಧದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ 2.12 ಕೋಟಿ ಜಮೀನುಗಳನ್ನು ಆರ್ಟಿಸಿ ಜೊತೆಗೆ ಆಧಾರ್ ಜೋಡಿಸಲಾಗಿದೆ. ಇದನ್ನೆಲ್ಲಾ ಮಾಡಿದ್ದು ಗ್ರಾಮ ಸಹಾಯಕರು ಮತ್ತು ಗ್ರಾಮ ಲೆಕ್ಕಿಗರು. ಇವರು ಫೀಲ್ಡ್ಗೆ ಹೋಗಿ ಈ ಕೆಲಸ ಮಾಡದಿದ್ದರೆ ಆಧಾರ್ ಸೀಡಿಂಗ್ ಸಾಧ್ಯವೇ ಇರುತ್ತಿರಲಿಲ್ಲ. ಹಲವರು ತಮ್ಮ ಕೈಯಿಂದ ಖರ್ಚು ಮಾಡಿ ಆಧಾರ್ ಸೀಡಿಂಗ್ ಮಾಡಿದ್ದಾರೆ. ಹೀಗಾಗಿ ಗ್ರಾಮ ಸಹಾಯಕರು ಹಾಗೂ ಗ್ರಾಮ ಲೆಕ್ಕಿಗರಿಗೆ 4.5 ಕೋಟಿ ರೂ. ಪ್ರೊತ್ಸಾಹ ಧನ ನೀಡಬೇಕು ಎಂದು ತೀರ್ಮಾನಿಸಲಾಗಿದೆ ಎಂದರು.