ಬೆಂಗಳೂರು: ಅಮೃತ ಮಹೋತ್ಸವ ಪ್ರಯುಕ್ತ ಬೆಂಗಳೂರಿನ ಬಡ ಕುಟುಂಬಗಳಿಗೆ ವಸತಿ ಕಲ್ಪಿಸಲು ಜಿಬಿ ಎ (ಹಿಂದಿನ ) ಬಿಬಿಎಂಪಿ 550 ಫಲಾನುಭವಿಗಳಿಗೆ ತಲಾ ಐದು ಲಕ್ಷ ರೂ. ನಂತೆ ರಾಜೀವ್ ಗಾಂಧಿ ವಸತಿ ನಿಗಮದ ಖಾತೆಗೆ ಜಮೆ ಮಾಡಿದೆ. ಆದರೆ ಫಲಾನುಭವಿಗಳ ಪಟ್ಟಿ ಕೊಡದ ಕಾರಣ ಮನೆ ಹಂಚಿಕೆ ಮಾಡಿಲ್ಲ ಎಂದು ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ್ ಶಿನ್ನಾಳ್ಕರ್ ಸ್ಪಷ್ಟ ಪಡಿಸಿದ್ದಾರೆ.
ಜಿಬಿಎ ಜಮೆ ಮಾಡಿರುವ ಮೊತ್ತ ಸುರಕ್ಷಿತ ವಾಗಿದ್ದು ಯಾವುದೇ ಆತಂಕ ಪಡಬೇಕಿಲ್ಲ. ಪಾಲಿಕೆ ವತಿಯಿಂದ ಫಲಾನುಭವಿಗಳ ಪಟ್ಟಿ ಕೊಟ್ಟ ತಕ್ಷಣ ಮುಖ್ಯಮಂತ್ರಿ ಯವರ ಒಂದು ಲಕ್ಷ ಮನೆ ಯೋಜನೆಯಡಿಯಲ್ಲಿ ಮನೆ ಹಂಚಿಕೆ ಮಾಡಲಾಗುವುದು. 19 ಸಾವಿರ ಮನೆಗಳು ಈಗಾಗಲೇ ಹಂಚಿಕೆಗೆ ಸಿದ್ದವಿದೆ ಎಂದು ಹೇಳಿದ್ದಾರೆ.
ಈಗಾಗಲೇ ಫಲಾನುಭವಿಗಳ ಪಟ್ಟಿ ನೀಡುವ ಸಂಬಂಧ ಹಲವಾರು ಬಾರಿ ಪತ್ರ ಬರೆಯಲಾಗಿದೆ. ಆದರೂ ಪಾಲಿಕೆ ವತಿಯಿಂದ ಪಟ್ಟಿ ಬಂದಿಲ್ಲ. ಫಲಾನುಭವಿಗಳ ಪಟ್ಟಿ ಕಳುಹಿಸುವವರೆಗೂ ಈ ಹಣ ಬಳಕೆ ಮಾಡುವಂತಿಲ್ಲ ಎಂದು ಜಿಬಿ ಎ ಷರತ್ತು ವಿಧಿಸಿದೆ. ನಿಗಮ ಈ ಹಣವನ್ನು ಬಳಕೆಯೂ ಮಾಡಿಲ್ಲ. ಖಾತೆಯಲ್ಲೇ ಇಡಲಾಗಿದೆ ಎಂದಿದ್ದಾರೆ.
ಹಣ ವಾಪಾಸ್ ಕಳುಹಿಸಲು ನಿಗಮ ಮುಂದಾಯಿತಾದರೂ ಹೈಕೋರ್ಟ್ ತಡೆ ಯಿಂದ ಸಾಧ್ಯವಾಗಿಲ್ಲ. ಹೀಗಾಗಿ ಈ ಪ್ರಕರಣ ದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಲೋಪ ಆಗಿಲ್ಲ. ಹಲವು ದಿನಗಳ ಹಿಂದೆ ಫಲಾನುಭವಿಗಳು ನಿಗಮದ ಕಚೇರಿಗೆ ಬಂದು ಪ್ರತಿಭಟನೆ ಮಾಡಿದಾಗಲೂ ವಾಸ್ತವಾಂಶ ತಿಳಿಸಲಾಗಿದೆ ಎಂದು ಪರಶುರಾಮ್ ಶಿನ್ನಾಳ್ಕರ್ ತಿಳಿಸಿದ್ದಾರೆ.








