ಬೆಂಗಳೂರು : ಬಾಹ್ಯ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಅಂಕಗಳನ್ನು ಸೇರ್ಪಡೆಗೊಳಿಸಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸುತ್ತಿರುವ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಮಹತ್ವದ ಆದೇಶ ಹೊರಡಿಸಿದೆ.
2025-26ನೇ ಸಾಲಿನಿಂದ ಜಾರಿಗೆ ಬರುವಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಬಾಹ್ಯ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಅಂಕಗಳನ್ನು ಸೇರ್ಪಡೆಗೊಳಿಸಿ ಫಲಿತಾಂಶ ಪ್ರಕಟಿಸುವ ಕುರಿತು ಸರ್ಕಾರದ ಅಧಿಸೂಚನೆ ಸಂಖ್ಯೆ:ಇಪಿ 211 ಎಸ್‌ಎಲ್‌ಬಿ 2025 ದಿನಾಂಕ:15.10.2025 ರಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಲಿ ಕಾಯ್ದೆ 1966 Annexure Ill ನಿಯಮ 16 ರಲ್ಲಿ ನಿಯಮಗಳಲ್ಲಿ ತಿದ್ದುಪಡಿಮಾಡಿ ಅಧಿಸೂಚನೆ ಹೊರಡಿಸಲಾಗಿರುತ್ತದೆ.
ಅಭ್ಯರ್ಥಿಗಳು ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆ ಎರಡೂ ಸೇರಿ ಒಟ್ಟಾರೆ 33% ಅಂಕಗಳನ್ನು ಪಡೆದು, ಒಟ್ಟು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸಿದಲ್ಲಿ ಮತ್ತು ಆಯಾ ವಿಷಯದ ಒಟ್ಟು ಅಂಕಗಳಲ್ಲಿ ಕನಿಷ್ಠ 30% ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರೆಂದು ಘೋಷಿಸಲಾಗುತ್ತದೆ” ಎಂದಿರುತ್ತದೆ.
ಪ್ರಸ್ತುತ ಸಾಲಿನಲ್ಲಿಯೂ ಸಹ ಆಂತರಿಕ ಮೌಲ್ಯಮಾಪನವನ್ನು 125 ಅಂಕಗಳಿಗೆ ಅಂದರೆ ಪ್ರಥಮ ಭಾಷೆ 25 ಅಂಕಗಳಿಗೆ ಮತ್ತು ಉಳಿದ 5 ವಿಷಯಗಳಿಗೆ 20 ಅಂಕಗಳಿಗೆ ನಡೆಸಲಾಗುವುದು. ಬಾಹ್ಯ ಪರೀಕ್ಷೆಯನ್ನು 500 ಅಂಕಗಳಿಗೆ ಅಂದರೆ ಪ್ರಥಮ ಭಾಷೆ 100 ಅಂಕಗಳಿಗೆ ಮತ್ತು ಉಳಿದ 5 ವಿಷಯಗಳಿಗೆ 80 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು.
NSQF ವಿಷಯಗಳಲ್ಲಿ ಬಾಹ್ಯ ಪರೀಕ್ಷೆಯನ್ನು 60 ಅಂಕಗಳಿಗೆ ಪರೀಕ್ಷೆ ನಡೆಸಿ, 30 ಅಂಕಗಳಿಗೆ ಲೆಕ್ಕ ಹಾಕಲಾಗುತ್ತದೆ. ಪ್ರಾಯೋಗಿಕ ಪರೀಕ್ಷೆಯನ್ನು 50 ಅಂಕಗಳಿಗೆ ನಡೆಸಲಾಗುತ್ತದೆ. ಬಾಹ್ಯ ಪರೀಕ್ಷೆಯಲ್ಲಿ ಕನಿಷ್ಠ 10 ಅಂಕಗಳು ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ಕನಿಷ್ಠ 18 ಅಂಕಗಳನ್ನು ಗಳಿಸಬೇಕು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಶಾಲಾ ವಿದ್ಯಾರ್ಥಿಗಳು ಮತ್ತು ಶಾಲಾ ಪುನರಾವರ್ತಿತ ವಿದ್ಯಾರ್ಥಿಗಳು ಎಲ್ಲಾ ವಿಷಯಗಳ ಬಾಹ್ಯ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಎರಡೂ ಸೇರಿದಂತೆ ಒಟ್ಟಾರೆ ಶೇಕಡ 33 ಅಂದರೆ 625 ಅಂಕಗಳಿಗೆ 206 ಅಂಕಗಳನ್ನು ಗಳಿಸಬೇಕು. ಹಾಗೆಯೇ ಖಾಸಗಿ ಮತ್ತು ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಬಾಹ್ಯ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳು ಸೇರಿ 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸಬೇಕು.
ದಿನಾಂಕ:15.10.2025ರ ಸರ್ಕಾರದ ಆದೇಶದನ್ವಯ 2025-26ನೇ ಸಾಲಿನಿಂದ ಜಾರಿಗೆ ಬರುವಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ಶಾಲಾ ವಿದ್ಯಾರ್ಥಿ, ಖಾಸಗಿ ಅಭ್ಯರ್ಥಿ ಮತ್ತು ಎಲ್ಲಾ ವಿಧದ ಪುನರಾವರ್ತಿತ ಅಭ್ಯರ್ಥಿಗಳಿಗೆ ಅನ್ವಯವಾಗುವಂತೆ ಫಲಿತಾಂಶ ಉತ್ತೀರ್ಣತೆಯಲ್ಲಿ ಅನುಷ್ಠಾನಗೊಳಿಸಲಾಗುವುದು.









