ಶಿವಮೊಗ್ಗ: ಇನ್ನು ಮುಂದೆ ಎಲ್ಲಾ ಪಡಿತರ ಅಂಗಡಿಗಳಲ್ಲೂ ಆಯಾ ತಿಂಗಳ 10ನೇ ತಾರೀಕು ಪಡಿತರ ನೀಡುವಂತೆ ಕ್ರಮವಹಿಸಲಾಗುವುದು. ‘ಒನ್ ನೇಷನ್ ಒನ್ ಕಾರ್ಡ್’ ಯೋಜನೆಯಡಿ ವಲಸಿಗ ಕಾರ್ಮಿಕರಿಗೂ ತಕ್ಷಣ ರೇಷನ್ ಕಾರ್ಡ್ ನೀಡಲಾಗುತ್ತದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ರಾಜ್ಯದಲ್ಲಿ ಶೇ 15ರಷ್ಟು ಬಿಪಿಎಲ್ ಕಾರ್ಡ್ ರದ್ದಾಗಲಿವೆ. ಆದರೆ ಅರ್ಹರು ಆತಂಕ ಪಡುವುದು ಬೇಡ. ರಾಜ್ಯದಲ್ಲಿ ಒಂದೇ ಒಂದು ಬಿಪಿಎಲ್ ಕಾರ್ಡ್ ಕೂಡ ರದ್ದಾಗಲ್ಲ. ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದಾಗಲಿವೆ. ಅನರ್ಹರ ಕಾರ್ಡ್ ರದ್ದು ಮಾಡಿ ಎಪಿಎಲ್ ಕಾರ್ಡ್ ಮಾಡುತ್ತೇವೆ ಎಂಬುದಾಗಿ ತಿಳಿಸಿದರು.
ರಾಜ್ಯದಲ್ಲಿ ಶೇ.15ರಷ್ಟು ಬಿಪಿಎಲ್ ಕಾರ್ಡ್ ದಾರರರಷ್ಟೇ ರದ್ದು ಮಾಡಲಾಗಿದೆ. ಇದನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಕ್ಯಾನ್ಸಲ್ ಮಾಡಲಾಗಿದೆ. ಯಾವುದೇ ಫಲಾನುಭವಿಗಳಿಗೂ ಮೋಸವಾಗುತ್ತಿಲ್ಲ. ಶೀಘ್ರದಲ್ಲಿಯೇ ಎಣ್ಣೆ, ಬೇಳೆ, ಕಾಳುಗಳು ಸೇರಿದಂತೆ ಪೌಷ್ಟಿಕಾಂಶ ಆಹಾರ ಪದಾರ್ಥ ವಿತರಣೆ ಮಾಡಲಾಗುತ್ತದೆ ಎಂದರು.
ಪಡಿತರ ವಿತರಕರಿಗೆ ಮೇ ತಿಂಗಳಿಂದ ಕಮಿಷನ್ ಬಾಕಿ ಇದೆ ಎಂಬ ಪ್ರಶ್ನೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ಸೇರಿಸಿ ಸೆಪ್ಟೆಂಬರ್ವರೆಗಿನ ಕಮಿಷನ್ ಕೊಡಲು ನಿರ್ಧರಿಸಿದೆ. ವಾರದೊಳಗೆ ಎಲ್ಲ ಪಡಿತರ ವಿತರಕರಿಗೆ ಕಮಿಷನ್ ನೀಡಲಿದ್ದೇವೆ ಎಂದರು.








