ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯ್ತಿಗಳಿಗೆ ಪ್ರತಿ ತಿಂಗಳು ವೇತನ ಪಾವತಿಯಲ್ಲಿ ಕೆಲವು ಕಡೆ ವಿಳಂಬವಾಗುತ್ತಿತ್ತು. ಈ ಸಂಬಂಧ ಸರ್ಕಾರಕ್ಕೆ ದೂರುಗಳು ಸಹ ಸಲ್ಲಿಕೆಯಾಗಿದ್ದವು. ಈ ಹಿನ್ನಲೆಯಲ್ಲಿ ಇನ್ಮುಂದೆ ಪ್ರತಿ ತಿಂಗಳು ವೇತನವನ್ನು ಸಕಾಲದಲ್ಲಿ ಪಾವತಿಸುವಂತೆ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ.
ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಿಂದ ಹೊರಡಿಸಿರುವಂತ ಆದೇಶದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನವನ್ನು ನಿಯಮಿತವಾಗಿ ಪಾವತಿಸುವುದು ಆದ್ಯತೆಯ ವಿಷಯವಾಗಿರುತ್ತದೆ. ಪ್ರಸ್ತುತ ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ವರ್ಗದ ಮಾದರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ದಿನಾಂಕ:01.03.2018ರಿಂದ ಜಾರಿಗೆ ಬರುವಂತೆ ಸರ್ಕಾರದ ನಿಧಿಯಿಂದಲೇ ವೇತನ ಪಾವತಿಸಲು ಕ್ರಮವಹಿಸಲಾಗುತ್ತಿದ್ದು, ಅಗತ್ಯವಿರುವ ಅನುದಾನವನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳ ಇ.ಎಫ್.ಎಂ.ಎಸ್ ಖಾತೆಗಳಿಗೆ ಸರ್ಕಾರದಿಂದಲೇ ಬಿಡುಗಡೆ ಗೊಳಿಸಲಾಗುತ್ತಿದೆ ಎಂದಿದೆ.
ಆದಾಗ್ಯೂ ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ಪಾವತಿಸಲು ವಿಳಂಬ ಮಾಡುತ್ತಿರುವ ಮತ್ತು ವೇತನ ಪಾವತಿ ಮಾಡದೇ ಇರುವ ಕುರಿತಾಗಿ ಸರ್ಕಾರದಲ್ಲಿ ಹಲವಾರು ದೂರುಗಳು ಸ್ವೀಕೃತಗೊಳ್ಳುತ್ತಿವೆ. ಗ್ರಾಮ ಪಂಚಾಯಿತಿಗಳಲ್ಲಿ ಅನುದಾನ ಲಭ್ಯವಿದ್ದರೂ ಸಹ ನಿಯಮಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಸಿಬ್ಬಂದಿಗಳ ವೇತನ ಪಾವತಿಸದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಈ ವಿಷಯವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ಪ್ರಸ್ತುತ ಅವಧಿಯವರೆಗೆ ವೇತನ ಪಾವತಿಗೆ ಬಾಕಿಯಿರುವ ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ವೇತನವನ್ನು ಈ ಪತ್ರ ತಲುಪಿದ 02 ದಿನಗಳ ಒಳಗಾಗಿ ಪಾವತಿಸಿ, ವೇತನ ಪಾವತಿಗೆ ಯಾವುದೇ ಬಾಕಿ ಇಲ್ಲದಿರುವ ಕುರಿತು ಆಯುಕ್ತಾಲಯಕ್ಕೆ ವರದಿಯನ್ನು ಸಲ್ಲಿಸಲು ತಿಳಿಸಿದೆ.
ಮುಂದುವರೆದು, ಇನ್ನು ಮುಂದೆ ಪ್ರತಿ ಮಾಹೆಯ 05 ನೇ ತಾರೀಖಿನ ಒಳಗಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ವೇತನ ಖಾತೆಗಳಿಗೆ ವೇತನ ಪಾವತಿಯಾಗುವಂತೆ ಕ್ರಮವಹಿಸಲು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಲು ತಿಳಿಸಿದ ಹಾಗೂ ನಿಯಮಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ವೇತನ ಪಾವತಿಸದೇ ನಿರ್ಲಕ್ಷ್ಯತೆ ವಹಿಸಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು. ತಮ್ಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವೇತನವು ನಿಯಮಿತವಾಗಿ ಪಾವತಿಯಾಗುತ್ತಿರುವ ಕುರಿತು ಪ್ರತಿ ತಿಂಗಳು ಮೇಲ್ವಿಚಾರಣೆ ನಡೆಸುವಂತೆ ತಿಳಿಸಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BIG BREAKING: ಅ.23ರವರೆಗೆ ಬೆಂಗಳೂರಲ್ಲಿ ಜಾತಿಗಣತಿ ಸಮೀಕ್ಷೆಗೆ ತಾತ್ಕಾಲಿಕವಾಗಿ ಬ್ರೇಕ್ ನೀಡಿದ ಸರ್ಕಾರ
BIG Alert: ‘ಪಟಾಕಿ’ ಸಿಡಿಸುವಾಗ ತಪ್ಪದೇ ಈ ಸಲಹೆ, ಎಚ್ಚರಿಕೆ ಪಾಲಿಸಿ!