ಬೆಂಗಳೂರು: ರಾಜ್ಯದ ಎಲ್ಲಾ ತಾಲೂಕುಗಳಲ್ಲಿಯೂ ಅಭಿಯಾನ ಮಾದರಿಯಲ್ಲಿ ಪೌತಿ ಖಾತೆ ಮಾಡಿಕೊಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ತಹಶೀಲ್ದಾರರುಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ಕಳೆದ ಎರಡು ವರ್ಷಗಳಿಂದ ತಹಶೀಲ್ದಾರ್ ನ್ಯಾಯಾಲಯಗಳ ತಕರಾರು ಅರ್ಜಿಗಳ ವಿಲೇ ಕೆಲಸ ಗಮನಾರ್ಹ ರೀತಿಯಲ್ಲಿ ಪ್ರಗತಿ ಕಂಡಿತ್ತು. ಈ ಮೊದಲು ಒಂದು ಪ್ರಕರಣದ ಇತ್ಯರ್ಥಕ್ಕೆ 212 ದಿನ ತೆಗೆದುಕೊಳ್ಳುತ್ತಿದ್ದರೆ, ಪ್ರಸ್ತುತ 82 ದಿನಕ್ಕೆ ಇಳಿಸಲಾಗಿತ್ತು. ಆದರೆ, ಬರುಬರುತ್ತಾ ತಕರಾರು ಅರ್ಜಿಗಳ ವಿಲೇ ಕೆಲಸ ಮತ್ತೆ ವೇಗ ಕಳೆದುಕೊಳ್ಳುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಬೇಸರ ಹೊರಹಾಕಿದರು.
ರಾಜ್ಯದಲ್ಲಿ 52 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿದೆ. ಈ ಪೈಕಿ ಫೌತಿ ಖಾತೆ ಆಂದೋಲನದ ಮೂಲಕ 3,35,727 ಪ್ರಕರಣಗಳಲ್ಲಿ ಮೃತರ ಹೆಸರಿನಿಂದ ಅವರ ವಾರಸುದಾರರ ಹೆಸರಿಗೆ ಜಮೀನು ವರ್ಗಾವಣೆ ಮಾಡಲಾಗಿದೆ. ಆದರೆ, ಈ ಸಾಧನೆ ತೃಪ್ತಿಕರವಾಗಿಲ್ಲ. ಹೀಗಾಗಿ ಶೀಘ್ರದಲ್ಲಿ ಎಲ್ಲಾ ತಾಲೂಕುಗಳಲ್ಲೂ ಅಭಿಯಾನ ಮಾದರಿಯಲ್ಲಿ ಫೌತಿಖಾತೆ ಕೆಲಸ ನಡೆಯಬೇಕು” ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಮೃತರ ಹೆಸರಿನಲ್ಲಿರುವ ಜಮೀನುಗಳಿಗೆ ಪಿಎಂ ಕಿಸಾನ್, ಹನಿ ನೀರಾವರಿ ಹಾಗೂ ಯಂತ್ರೋಪಕರಣ ಖರೀದಿ ಸಬ್ಸಿಡಿ ನೀಡದಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ರೈತರಿಗೆ ತೊಂದರೆಯಾಗಲಿದೆ, ಅನ್ಯಾಯವಾಗಲಿದೆ. ಹೀಗಾಗಿ ಜನರಿಂದ ಅರ್ಜಿ ಕರೆಯದೆ ನಾವೇ ರೈತರ ಮನೆ ಬಾಗಿಲಿಗೆ ತೆರಳಿ ಅಭಿಯಾನ ಮಾದರಿಯಲ್ಲಿ ಫೌತಿ ಖಾತೆ ಮಾಡಿಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಅಭಿಯಾನಕ್ಕೆ ಮತ್ತಷ್ಟು ವೇಗ ತುಂಬಬೇಕು ಎಂದು ತಾಕೀತು ಮಾಡಿದರು.