ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರಿಗೆ ತಿಂಗಳ 5 ನೇ ತಾರೀಖಿನ ಒಳಗಾಗಿ ತಪ್ಪದೇ ವೇತನ ಪಾವತಿ ಮಾಡಬೇಕು. ಇ.ಎಸ್.ಐ. ಪಿಫ್ ಜಮಾ ಕುರಿತು ಸಂಬಂಧಪಟ್ಟ ಏಜೆನ್ಸಿಯಿಂದ ಮಾಹಿತಿ ಪಡೆದುಕೊಳ್ಳಬೇಕು. ಪೌರ ಕಾರ್ಮಿಕರಿಗೆ ವೇತನ ಪ್ರಮಾಣ ಪತ್ರವನ್ನು ನೀಡಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೊಗದ ಅಧ್ಯಕ್ಷ ರಘು.ಪಿ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸ್ವಚ್ಛತಾ ಹಾಗೂ ಪೌರ ಕಾರ್ಮಿಕರಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯ ಪೌರ ಕಾರ್ಮಿಕರಿಗೆ ನಿವೇಶನ ನೀಡಲು ಜಾಗ ಗುರುತಿಸಿ ಮೀಸಲು ಇಡಬೇಕು. ಪೌರ ಕಾರ್ಮಿರೊಂದಿಗಿನ ಸಂವಾದಲ್ಲಿ ಸಾಕಷ್ಟು ಸಮಸ್ಯೆಗಳು ಕೇಳಿಬಂದಿವೆ. ನಗರಸಭೆಗಳಲ್ಲಿ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಸಮವಸ್ತ್ರಗಳನ್ನು ವಿತರಣೆ ಮಾಡಿಲ್ಲ. ನೇಮಕಾತಿಗೊಂಡು ಎರಡು ವರ್ಷಗಳಾದವರಿಗೆ ಪ್ರೊಬೆಷನರಿ ಅವಧಿ ಘೋಷಿಸಿಲ್ಲ. ವೈದ್ಯಕೀಯ ತಪಾಸಣೆ ವರದಿ ಪೌರ ಕಾರ್ಮಿಕರ ಕೈಗೆ ನೀಡುತ್ತಿಲ್ಲ. ಪೌಷ್ಠಿಕ ಉಪಹಾರ, ಶುದ್ಧ ಕುಡಿಯುವ ನೀರು ಸಹ ನೀಡದೆ ಅಸಡ್ಡೆ ಮಾಡುತ್ತಿರುವುದಾಗಿ ಸಾಕಷ್ಟು ಪೌರಕಾರ್ಮಿಕರು ಅಹವಾಲು ಹೇಳಿಕೊಂಡಿದ್ದಾರೆ. ಪೌರಕಾರ್ಮಿರನ್ನು ಸಹ ವಿಶ್ವಾಸದಿಂದ ಕಂಡು ಅವರ ಅಹವಾಲುಗಳನ್ನು ಆಲಿಸಿದರೆ, ಈ ಎಲ್ಲಾ ಸಮಸ್ಯೆಗಳನ್ನು ಅಧಿಕಾರಿಗಳು ತಮ್ಮ ಹಂತದಲ್ಲಿಯೇ ಬಗೆಹರಿಸಬಹುದು. ಆದರೆ ಅಧಿಕಾರಿಗಳ ತಪ್ಪು ಮನೋಧೋರಣೆಯಿಂದಾಗಿ ಆಯೋಗಕ್ಕೆ ಇಂತಹ ದೂರುಗಳನ್ನು ಸ್ವೀಕರಿಸುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆ ಹಾಗೂ ಸ್ವಚ್ಛತಾ ಕೆಲಸ ಮಾಡುವ ಇತರೆ ಇಲಾಖೆಗಳು ಇಂತಹ ಸಮಸ್ಯೆಗಳಿಗೆ ಇತಿಶ್ರೀ ಹಾಡಬೇಕು. ಇಲ್ಲವಾದರೆ ಆಯೋಗ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಲಿದೆ ಎಂದು ಅಧ್ಯಕ್ಷ ರಘು.ಪಿ ಎಚ್ಚರಿಸಿದರು.
ಸಂಪೂರ್ಣ ಆರೋಗ್ಯ ತಪಾಸಣೆಗೆ ಸೂಚನೆ:
ಪೌರ ಕಾರ್ಮಿಕರಿಗೆ ನೆಪ ಮಾತ್ರ ವೈದ್ಯಕೀಯ ತಪಾಸಣೆ ನಡೆಸುವ ಕಾರ್ಯವಾಗಬಾರದು. ನಿಯಮಿತವಾಗಿ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಬೇಕು. ಪಿ.ಬಿ., ಇ.ಸಿ.ಜಿ, ಇಕೊ, ಹೊಟ್ಟೆಗೆ ಸಂಬಂಧಿಸಿದ ತಪಾಸಣೆಗಳನ್ನು ನಡೆಸುವುದರೊಂದಿಗೆ ಸರಿಯಾದ ದಾಖಲೆ ನಿರ್ವಹಿಸಬೇಕು. ಪೌರ ಕಾರ್ಮಿಕರೊಂದಿಗೆ ಆರೋಗ್ಯ ತಪಾಸಣೆ ವೈದ್ಯಕೀಯ ವಿವರಗಳನ್ನು ಆಯಾ ಪೌರಕಾರ್ಮಿಕರಿಗೆ ಹಂಚಿಕೊಳ್ಳಬೇಕು. ಜಿಲ್ಲೆಯ ಎಲ್ಲಾ ಪೌರಕಾರ್ಮಿಕರಿಗೆ ನಿವೇಶನ ಮಂಜೂರಾತಿ ಮಾಡುವುದು ನನ್ನ ಪ್ರಥಮ ಆದ್ಯತೆಯಾಗಿದೆ. ಈಗಾಗಲೇ ಖಾಯಂಗೊಂಡ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ನೀಡಬೇಕು. ಪೌರ ಕಾರ್ಮಿಕರು ಸಂವಾದದಲ್ಲಿ ಹೇಳಿಕೊಂಡ ಎಲ್ಲಾ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳಲಾಗಿದೆ. ಈ ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಕೊಡಲಾಗುವುದು. ಕೂಡಲೇ ಕ್ರಮ ಕೈಗೊಂಡು ಆಯೋಗಕ್ಕೆ ಮಾಹಿತಿ ನೀಡುವಂತೆ ರಾಜ್ಯ ಸಫಾಯಿ ಕರ್ಮಚಾರಿ ಆಯೊಗದ ಅಧ್ಯಕ್ಷ ರಘು.ಪಿ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಈಗಾಗಲೇ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು 1,000 ಎಕರೆ ಭೂಮಿ ಗುರುತಿಸಲಾಗಿದೆ. ಚಿತ್ರದುರ್ಗ ನಗರದಲ್ಲಿ ಭೂಮಿ ಮಂಜೂರಾತಿ ಮಾಡಲು ಖಾಲಿ ಜಾಗಗಳು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿವೆ. ಈ ಕುರಿತು ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿ ಸರ್ವೆಗೆ ಆದೇಶಿಸಲಾಗಿದೆ. ಖಾಲಿ ಇರುವ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆ ಸುಪರ್ದಿಗೆ ಪಡೆದು ನಗರ ಪ್ರದೇಶದಲ್ಲಿಯೂ ಸಹ ನಿವೇಶನ ಹಂಚಲು ಜಾಗ ಗುರುತಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಭೆಯಲ್ಲಿ ತಿಳಿಸಿದರು.
ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ಮಂಜೂರಾದ 88 ಮನೆ ನಿರ್ಮಾಣ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಮ್ಯಾನುವಲ್ ಸ್ಕ್ಯಾವೆಂಜಿಂಗ್ ಕಾರ್ಮಿಕರ ಕುರಿತು ಅಧಿಕಾರಿಗಳು ಪೂರ್ಣ ಮಾಹಿತಿ ಪಡೆದು ಜಿಲ್ಲಾ ಸಮಿತಿಗೆ ಶಿಫಾರಸ್ಸು ಮಾಡಬೇಕು. ಈ ಹಿಂದೆ ಸರ್ವೆಯಲ್ಲಿ ಗುರುತಿಸಿದ್ದ ಮ್ಯಾನುಯಲ್ ಸ್ಕಾವೆಂಜಿಂಗ್ ಕಾರ್ಮಿಕರ ಮಾಹಿತಿ ಸಂಗ್ರಹಿಸಿ, ಅವರಿಗೆ ಸವಲತ್ತುಗಳನ್ನು ತಲುಪಿಸಲು ಕ್ರಮ ಕೈಗೊಳ್ಳಬೇಕು. ಖಾಸಗಿ ವ್ಯಕ್ತಿಗಳು ಮ್ಯಾನುಯಲ್ ಸ್ಕಾವೆಂಜಿಂಗ್ ಕಾರ್ಮಿಕರನ್ನು ನೇಮಿಸದಂತೆ ಕಾಯ್ದೆ ಕುರಿತು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಮಹಾದೇವ ಸ್ವಾಮಿ, ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಡಿವೈಎಸ್‍ಪಿ ದಿನಕರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇμÁ್ಮ ಹಾನಗಲ್ ಸೇರಿದಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆ ಮುಖ್ಯಾಧಿüಕಾರಿಗಳು ಮತ್ತಿರರು ಇದ್ದರು.








