ಬೆಂಗಳೂರು : ರಾಜ್ಯ ಸರ್ಕಾರವು ಗ್ರಾಮೀಣ ಜನತೆಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ರಾಜ್ಯಾದ್ಯಂತ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ತಲೆಯೆತ್ತಿರುವ ನಿವೇಶನಗಳು, ಕಟ್ಟಡಗಳು ಇನ್ನುಮುಂದೆ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇದ್ದಂತೆ ‘ಬಿ-ಖಾತಾ’ ಪಡೆಯಬಹುದು.
ಹೌದು, ಅನಧಿಕೃತ ಸ್ವತ್ತುಗಳನ್ನು ‘ನಮೂನೆ-11ಬಿ’ ರಿಜಿಸ್ಟರ್ನಲ್ಲಿ ನೋಂದಾಯಿಸಲು ಅವಕಾಶ ಕಲ್ಪಿಸಿದ ಕಾಯಿದೆಯಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ನಿಯಮಾವಳಿಗಳನ್ನು ಜಾರಿಗೊಳಿಸಿದೆ.ಇದರಿಂದ ರಾಜ್ಯಾದ್ಯಂತ ಗ್ರಾ.ಪಂ ವ್ಯಾಪ್ತಿಯಲ್ಲಿರುವ 95,75,935 ಅನಧಿಕೃತ ಸ್ವತ್ತುಗಳು ‘ಬಿ-ಖಾತಾ’ ಪಡೆದು ತೆರಿಗೆ ವ್ಯಾಪ್ತಿಗೆ ಸೇರಲು ಅವಕಾಶ ಕಲ್ಪಿಸಿದಂತಾಗಿದೆ.
ನೂತನ ನಿಯಮಗಳಲ್ಲಿ ತೆರಿಗೆ ಲೆಕ್ಕಚಾರ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದ್ದು, ಇ-ಸ್ವತ್ತು ನಮೂನೆ ವಿತರಿಸಲು ನಿಗದಿತ ಕಾಲಾವಧಿಯನ್ನು 45 ದಿನಗಳಿಂದ 15 ದಿನಗಳಿಗೆ ಕಡಿತಗೊಳಿಸಲಾಗಿದೆ. ನಿಗದಿತ ಅವಧಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಅನುಮೋದನೆ ನೀಡದಿದ್ದಲ್ಲಿ ಸ್ವಂಚಾಲಿತ ಅನುಮೋದನೆಗೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
2025-26 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-272ರಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆಗಾಗಿ ಮತ್ತು ಗ್ರಾಮೀಣ ಜನರಿಗೆ ವ್ಯವಸ್ಥಿತ ರೀತಿಯಲ್ಲಿ ಸೇವೆಗಳನ್ನು ಒದಗಿಸುವ ಹಿತದೃಷ್ಟಿಯಿಂದ ʼಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರುವ ಆಸ್ತಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲು ಇ-ಸ್ವತ್ತು ಅಭಿಯಾನವನ್ನು ಆರಂಭಿಸಲಾಗುವುದುʼ ಎಂದು ಘೋಷಿಸಲಾಗಿತ್ತು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ವನ್ನು ದಿನಾಂಕ: 07.04.2025 ರಂದು ಅಧಿಸೂಚಿಸಿ ಪ್ರಕರಣ 199(ಬಿ) ಹಾಗೂ ಪ್ರಕರಣ 199(ಸಿ) ಅನ್ನು ಸೇರಿಸಲಾಗಿದೆ. ಪ್ರಕರಣ 199(ಬಿ) ಸ್ವತ್ತುಗಳಿಗೆ ಖಾತಾ ಅಥವಾ ಪಿಐಡಿ ನೀಡುವ ಕುರಿತಂತೆ ಹಾಗೂ ಪ್ರಕರಣ 199(ಸಿ) ಕಟ್ಟಡ ಮತ್ತು ಪರಿವರ್ತನೆಯಾಗದೇ ಇರುವ ಭೂಮಿ ಅಥವಾ ಪರಿವರ್ತನೆಯಾದ ಭೂಮಿ ಆದರೆ ಕಂದಾಯ ಭೂಮಿಯಲ್ಲಿನ ಅನುಮೋದಿತವಲ್ಲದ ಬಡಾವಣೆಯ ಮೇಲಿನ ತೆರಿಗೆಗಳ ಮೇಲೆ ಉಲ್ಲೇಖಿಸುತ್ತದೆ. ಈ ತಿದ್ದುಪಡಿಯನ್ನು ಆಧರಿಸಿ ಅಸ್ತಿತ್ವದಲ್ಲಿದ್ದ ತೆರಿಗೆ ನಿಯಮಗಳು 2021ನ್ನು ನಿರಸನಗೊಳಿಸಿ ಹೊಸದಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025ನ್ನು ಅಧಿಸೂಚಿಸಲಾಗಿದೆ.
ಗ್ರಾಮ ಪಂಚಾಯಿತಿಯ ಎಲ್ಲಾ ಆಸ್ತಿಗಳ ಕರಡು ಪ್ರತಿಗಳನ್ನು ಸಾರ್ವಜನಿಕರಿಗೆ ತಂತ್ರಾಂಶದ ಮೂಲಕ ಒದಗಿಸಿ ತಮ್ಮ ಆಸ್ತಿಗಳ ಮಾಹಿತಿಯನ್ನು ಸರಿಪಡಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ, ಆಸ್ತಿ ಮಾಲೀಕರು ತಮ್ಮ ಆಸ್ತಿಗಳ ತೆರಿಗೆಯನ್ನು ಗ್ರಾಮ ಪಂಚಾಯಿತಿಗೆ ಪಾವತಿಸುವ ಮೂಲಕ ದಾಖಲೆ ಪಡೆಯಲು ಹಾಗೂ ಗ್ರಾಮ ಪಂಚಾಯತಿಯ ಸ್ವಂತ ಸಂಪನ್ಮೂಲಗಳನ್ನು ವೃದ್ದಿಗೊಳಿಸುವುದರ ಮೂಲಕ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳಲು ಸಹಕಾರಿಯಾಗಲಿದೆ.
ತೆರಿಗೆ, ದರ ಅಥವಾ ಶುಲ್ಕಗಳ ನಿರ್ಧರಣೆ, ವಸೂಲಿ ಅಥವಾ ವಿಧಿಸುವಿಕೆಯಿಂದ ಬಾಧಿತನಾದ ಯಾವುದೇ ವ್ಯಕ್ತಿಯು ಉಪ ಕಾರ್ಯದರ್ಶಿ(ಅಭಿವೃದ್ದಿ) ಅವರಿಗೆ ಮೊದಲನೆ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಲಾಗಿದೆ. ಸದರಿ ಆದೇಶದಿಂದ ಬಾಧಿತನಾದ ವ್ಯಕ್ತಿಯು ಎರಡನೇ ಮೇಲ್ಮನವಿಯನ್ನು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
11ಬಿ ರಿಜಿಸ್ಟರ್ನಡಿ ನೋಂದಣಿ ಬಳಿಕ ಮೊದಲ ವರ್ಷ ದುಪ್ಪಟ್ಟು ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ. ನಂತರದ ವರ್ಷಗಳಲ್ಲಿ ವಾರ್ಷಿಕ ಆಸ್ತಿ ತೆರಿಗೆಯನ್ನಷ್ಟೇ ಸಂಗ್ರಹಿಸಲಾಗುತ್ತದೆ. ‘ಎ-ಖಾತಾ’ ಹಾಗೂ ‘ಬಿ-ಖಾತಾ’ ಸ್ವತ್ತುಗಳಿಗೆ “ಎಲೆಕ್ಟ್ರಾನಿಕ್-ಸ್ವತ್ತು’ (ಇ-ಸ್ವತ್ತು) ವಿತರಣೆ ಪ್ರಕ್ರಿಯೆಯನ್ನೂ ಸರಳಗೊಳಿಸಲಾಗಿದ್ದು, 45 ದಿನಗಳ ಬದಲಿಗೆ 15 ದಿನದಲ್ಲಿ ‘ಇ-ಸ್ವತ್ತು’ ವಿತರಣೆಗೆ ಕ್ರಮ ವಹಿಸಿರುವುದಾಗಿ ಇಲಾಖೆ ಪ್ರಕಟಿಸಿದೆ.