ಗ್ರಾಮ ಪಂಚಾಯತ್ ಅರಿವು ಕೇಂದ್ರದ ಮೂಲಕ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಗಳನ್ನು ನಡೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಜ್ಜಾಗಿದೆ.
ಸ್ಥಳೀಯ ಅಂಚೆ ಕಚೇರಿ, ಹಾಲು ಉತ್ಪಾದಕ ಸಹಕಾರ ಸಂಘ, ಬ್ಯಾಂಕ್, ಪಶುವೈದ್ಯಕೀಯ ಆಸ್ಪತ್ರೆ, ಅಂಗನವಾಡಿ ಕೇಂದ್ರ, ಗ್ರಾಮ ಪಂಚಾಯತ್, ಆಸ್ಪತ್ರೆ ಮುಂತಾದ ಸ್ಥಳಗಳಿಗೆ ಮಕ್ಕಳನ್ನು ಕರೆದೊಯ್ದು ಮಕ್ಕಳಿಗೆ ಪರಿಚಯ ಮಾಡಿಸಲಾಗುವುದು ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.
ಯೋಜನಾ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಯೋಜಿಸಲಾಗಿದ್ದು, ಪ್ರಮುಖವಾಗಿ ನಮ್ಮೂರಿನ ಪಕ್ಷಿಗಳು, ನೀರಿನ ಪಯಣ, ನನ್ನ ಊರು, ನಮ್ಮೂರಿನ ಇತಿಹಾಸ, ನಮ್ಮೂರ ಜಾತ್ರೆ, ನಮ್ಮೂರ ಜಾನಪದ ಗೀತೆಗಳು – ಕಥೆಗಳು, ನಮ್ಮೂರ ಕ್ರೀಡೆಗಳು, ನಮ್ಮೂರ ಕಲೆಗಳ ಬಗ್ಗೆ ಮಕ್ಕಳಿಗೆ ಮಾಹಿತಿ ಒದಗಿಸಲಾಗುವುದು ಎಂದು ಹೇಳಿದ್ದಾರೆ.
ಮಕ್ಕಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಕಾಮನಬಿಲ್ಲು ಮೂಡಿಸುವಿಕೆ, ವಿವಿಧ ಗಣಿತದ ಘನಾಕೃತಿಗಳ ಪರಿಚಯ, ಚಿನ್ನಿದಾಂಡು, ಗ್ರಾಮದಲ್ಲಿ ಬಳಸುವ ಅಳತೆ ಮತ್ತು ಮಾಪಕಗಳು, ಟ್ಯಾನ್‌ಗ್ರ್ಯಾಮ್, ಪೇಪರ್ ಫ್ಯಾನ್, ಜೆಟ್ ಪ್ಲೇನ್, ಕಣ್ಣುಮಿಟುಕಿಸುವ ಗೊಂಬೆ, ಚದುರಂಗ, ಕೇರಂ, ಆಕಾಶ ವೀಕ್ಷಣೆ ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ
ಯುವ ಸಮೂಹಕ್ಕೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏಪ್ರಿಲ್ 16 ರಂದು ಉದ್ಘಾಟಿಸಲಿದ್ದಾರೆ.
ಕೈಗಾರಿಕಾ ತರಬೇತಿ, ಯುವ ಮತ್ತು ಮಹಿಳೆಯರ ಸಬಲೀಕರಣ, ಪ್ರಾದೇಶಿಕ ಅಸಮತೋಲನ ನಿವಾರಣೆ, ಉದ್ಯೋಗ ಸೃಷ್ಟಿ, ವಿದೇಶಿ ಭಾಷಾ ಪ್ರಯೋಗಾಲಯಗಳ ಬಳಕೆ (ಜರ್ಮನಿ, ಜಪಾನ್), ವಿಶ್ವ ಕೌಶಲ್ಯ ಸ್ಪರ್ಧೆಗಳಿಗೆ ತರಬೇತಿ, ಜಾಗತಿಕ ಮಟ್ಟದಲ್ಲಿ ಉದ್ಯೋಗ ಅವಕಾಶ ಸೃಷ್ಟಿಸಿಕೊಡುವುದೇ ಕೇಂದ್ರ ಸ್ಥಾಪನೆಯ ಉದ್ದೇಶವಾಗಿದೆ.
ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೊಮೇಷನ್ ಮತ್ತು ರೋಬೋಟಿಕ್ಸ್, ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್, ಹಣಕಾಸು, ವಿಮೆ, ರಿಟೇಲ್, ಆತಿಥ್ಯ ಮತ್ತು ಸೇವೆ (ಹಾಸ್ಟಿಟಾಲಿಟಿ ಮತ್ತು ಸರ್ವೀಸ್) ಮುಂತಾದ ಕ್ಷೇತ್ರಗಳಲ್ಲಿ ತರಬೇತಿ ಸಿಗಲಿದೆ.