ಬೆಂಗಳೂರು: ಹಂತ ಹಂತವಾಗಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ವ್ಯವಸ್ಥೆ ಕಲ್ಪಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಟೆಲಿಐಸಿಯು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ನೂರಿತ ತಜ್ಞ ವೈದ್ಯರಿಂದ ನಮ್ಮ ಗ್ರಾಮೀಣ ಪ್ರದೇಶದ ಜನರಿಗೆ ಚಿಕಿತ್ಸೆ ದೊರೆಯುವಂತಾಗಬೇಕು. ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಾಗಿ ಹಳ್ಳಿಗಾಡಿನ ಜನರಿಗೆ ದೂರದ ಜಿಲ್ಲೆಗಳಿಗೆ ಬರುವುದು ಕಷ್ಟವಾಗುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿಯೇ ಸೂಪರ್ ಸ್ಪಾಷಾಲಿಟಿ ಕೇರ್ ಅನ್ನ ಒದಗಿಸುವ ನಿಟ್ಟಿನಲ್ಲಿ ಟೆಲಿಐಸಿಯೂ ವ್ಯವಸ್ಥೆ ಸಹಕಾರಿ. ತಾಲೂಕು ಮಟ್ಟದಲ್ಲಿ ಐಸಿಯು ಕೇಂದ್ರಗಳನ್ನು ಸ್ಥಾಪಿಸಿ, ಇಲ್ಲಿಂದಲೇ ಅವುಗಳನ್ನು ಪರಿಶೀಲಿಸುವಂತಹ ತಂತ್ರಜ್ಞಾನಗಳ ಬಳಕೆ ಕಾರ್ಯಕ್ಕೆ ನಾವು ಒತ್ತು ನೀಡಿದ್ದೇವೆ. ತುರ್ತು ಪರಿಸ್ಥಿತಿಯಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಆರೋಗ್ಯ ಪರಿಶೀಲನೆ ಹಾಗೂ ಚಿಕಿತ್ಸಾ ಸಲಹೆಗಳನ್ನ ಟೆಲಿಐಸಿಯು ಮೂಲಕ ತಜ್ಞ ವೈದ್ಯರಿಂದ ಪಡೆಯಬಹುದಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಈಗಾಗಲೇ ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಈ ವ್ಯವಸ್ಥೆಯನ್ನ ಜಾರಿಗೆ ತರಲಾಗಿದ್ದು, ಇದೀಗ ಬೆಂಗಳೂರಿನ ವಿಕ್ಟೋರಿಯಾ ಹಾಗೂ ಬಳ್ಳಾರಿ ಮೆಡಿಕಲ್ ಕಾಲೇಜುಗಳಲ್ಲಿ ಟೆಲಿಐಸಿಯು ಅನುಷ್ಠಾನಗೊಳಿಸಿದ್ದೇವೆ. ಒಟ್ಟು ನಾಲ್ಕು ಸರ್ಕಾರಿ ವೈದ್ಯಕೀಯ ಸಂಸ್ಥೆಗಳನ್ನ ಹಬ್ ಗಳಾಗಿ ರಚಿಸಲಾಗಿದ್ದು, ಇವುಗಳಿಗೆ 41 ತಾಲೂಕು ಆಸ್ಪತ್ರೆಗಳನ್ನ ಲಿಂಕ್ ಮಾಡಲಾಗಿದೆ. ಈ 41 ತಾಲೂಕು ಆಸ್ಪತ್ರೆಗಳಲ್ಲಿ 10 ಟೆಲಿಐಸಿಯು ಬೆಡ್ ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, AI ತಂತ್ರಜ್ಞಾನಗಳ ಮೂಲಕ ತಜ್ಞ ವೈದ್ಯರ ಸಲಹೆಯೊಂದಿಗೆ ಸೂಪರ್ ಸ್ಪೆಷಾಲಿಟಿ ಕೇರ್ ರೋಗಿಗಳಿಗೆ ದೊರೆಯಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಂಗಳೂರು ಹಾಗೂ ಬಳ್ಳಾರಿ ಕ್ಲಸ್ಟರ್ ಗೆ ತಲಾ 9 ತಾಲೂಕು ಆಸ್ಪತ್ರೆಗಳನ್ನ ಜೋಡಿಸಲಾಗಿದ್ದು, ಹುಬ್ಬಳ್ಳಿ ಕಿಮ್ಸ್ ಗೆ 10 ಹಾಗೂ ಮೈಸೂರು ವೈದ್ಯಕೀಯ ಸಂಸ್ಥೆಗೆ 13 ತಾಲೂಕು ಆಸ್ಪತ್ರೆಗಳನ್ನ ಲಿಂಕ್ ಮಾಡಲಾಗಿದೆ. ಒಟ್ಟು 41 ತಾಲೂಕು ಆಸ್ಪತ್ರೆಗಳನ್ನ ಸ್ಪೋಕ್ ಕೇಂದ್ರಗಳನ್ನಾಗಿ ರಚಿಸಲಾಗಿದೆ.
ಮುಂದಿನ ವರ್ಷ 60 ತಾಲೂಕು ಆಸ್ಪತ್ರೆಗಳಲ್ಲಿ ಟೆಲಿಐಸಿಯು ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಹಂತ ಹಂತವಾಗಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿಐಸಿಯು ಮೂಲಕ ತಜ್ಞ ವೈದ್ಯರ ಆರೋಗ್ಯ ಸೇವೆ ಕಲ್ಪಿಸಿಕೊಡುವುದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಗಮನಿಸಿ: ಬೆಂಗಳೂರಲ್ಲಿ ‘ಒಣ ಮರ, ರೆಂಬೆ-ಕೊಂಬೆ’ಗಳಿದ್ದರೇ ತೆರವಿಗೆ ಈ ‘ಸಹಾಯವಾಣಿ ಸಂಖ್ಯೆ’ಗೆ ಕರೆ ಮಾಡಿ