ಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶಗಳ ಇ-ಸ್ವತ್ತು ಮಂಜೂರಾತಿ ಪ್ರಕ್ರಿಯೆಯನ್ನು ಸರಳೀಕರಣ ಹಾಗೂ ಸಬಲೀಕರಣಗೊಳಿಸುವ ಸಲುವಾಗಿ ಕಂದಾಯ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಸಲುವಾಗಿ ಕಾರ್ಯಪಡೆ ರಚಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇ- ಖಾತೆ ಸಂಬಂಧ ಬುಧವಾರ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳೊಂದಿಗೆ ಅವರು ಚರ್ಚೆ ನಡೆಸಿದ್ದಾರೆ. ಗ್ರಾಮಠಾಣ ವ್ಯಾಪ್ತಿಯ ಹೊರ ಭಾಗದ ಬಹಳಷ್ಟು ಪ್ರದೇಶಗಳಲ್ಲಿ ಶಾಲೆಗಳು, ಉದ್ದಿಮೆಗಳು ಹಾಗೂ ವಸತಿ ಸಮುಚ್ಛಯಗಳು ನಿರ್ಮಾಣಗೊಂಡಿದ್ದು, ಬಹುಪಾಲು ಆಸ್ತಿಗಳು ಗ್ರಾಮ ಪಂಚಾಯತಿ ತೆರಿಗೆ ವ್ಯಾಪ್ತಿಗೆ ಒಳಪಡದೆ ಇರುವುದರಿಂದ ಗ್ರಾಮ ಪಂಚಾಯತಿಗಳ ಸಂಪನ್ಮೂಲ ಕ್ರೋಢೀಕರಣದಲ್ಲಿ ಹಿನ್ನಡೆ ಉಂಟಾಗಿದೆ ಎಂದರು.
ಗ್ರಾಮ ಪಂಚಾಯತಿಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಹಾಗೂ ನಾಗರಿಕರಿಗೆ ಇ-ಸ್ವತ್ತು ದಾಖಲೆ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವ ಅನಿವಾರ್ಯತೆ ಇರುವುದರಿಂದ ಸಮಸ್ಯೆಗಳನ್ನು ಬಗಹರಿಸಿ ಪರಿಹಾರಗಳನ್ನು ಕಂಡುಕೊಳ್ಳಲು ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.
ಗ್ರಾಮಗಳಿಗೆ ಹೊಂದಿಕೊಂಡಂತೆ ಕಂದಾಯ ಭೂಮಿಯಲ್ಲಿ ಬಡಾವಣೆಗಳು ನಿರ್ಮಾಣಗೊಂಡಿದ್ದು, ಇಂತಹ ಬಡಾವಣೆಗಳಲ್ಲಿನ ನಿವಾಸಿಗಳು ಇ-ಸ್ವತ್ತು ದಾಖಲೆಯನ್ನು ಸುಗಮವಾಗಿ ಪಡೆದುಕೊಳ್ಳಲು ಈ ಕಾರ್ಯಪಡೆ ಪರಿಹಾರಗಳನ್ನು ಸೂಚಿಸಲಿದೆ ಎಂದು ಸ್ಪಷ್ಟಪಡಿಸಲಾಗಿದ್ದು, ಬುಧವಾರದ ಸಭೆಯಲ್ಲಿ ಇನ್ನಷ್ಟು ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.